ಈ ಕಾರಣಕ್ಕೆ ಪುನಿಯ ಇನ್ನು ಯಾವುದೇ ಕುಸ್ತಿ ಪಂದ್ಯದಲ್ಲಿ ಭಾಗವಹಿಸುವಂತಿಲ್ಲ
ಹೊಸದಿಲ್ಲಿ: ಉದ್ದೀಪನ ಮದ್ದು ಪರೀಕ್ಷೆಗೆ ಮಾದರಿ ನೀಡಲು ಅಸಹಕಾರ ತೋರಿದ ಕುಸ್ತಿಪಟು ಬಜರಂಗ್ ಪುನಿಯ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ನಾಲ್ಕು ವರ್ಷಗಳ ಅವಧಿಗೆ ಕಾಲ ಬ್ಯಾನ್ ಮಾಡಿದೆ.
ಮಾರ್ಚ್ 10ರಂದು ಸೋನೆಪತ್‌ನಲ್ಲಿ ರಾಷ್ಟ್ರೀಯ ತಂಡದ ಆಯ್ಕೆಗೆ ನಡೆದ ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಪುನಿಯಾ ಯೂರಿನ್ ಸ್ಯಾಂಪಲ್ ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದಾರೆ. ಇದನ್ನು ನಿಯಮ ಬಾಹಿರ ಎಂದು ಪರಿಗಣಿಸಿರುವ ನಾಡಾ ಪುನಿಯರನ್ನು ನಾಲ್ಕು ವರ್ಷಗಳ ಅವಧಿಗೆ ಬ್ಯಾನ್ ಮಾಡಿದೆ.
ಕಳೆದ ಏಪ್ರಿಲ್ 23ರಂದು ಪುನಿಯರನ್ನು ನಾಡಾ ಮೊದಲ ಬಾರಿಗೆ ಅಮಾನತುಗೊಳಿಸಿತ್ತು. ನಂತರ ವಿಶ್ವ ಕುಸ್ತಿ ಆಡಳಿತ ಮಂಡಳಿಯಿಂದ ಕೂಡ ಅವರು ಅಮಾನತಿಗೊಳಗಾಗಿದ್ದರು. ಇದರ ವಿರುದ್ಧ ಪುನಿಯಾ ಮೇಲ್ಮನವಿ ಸಲ್ಲಿಸಿದರೂ ನಾಡಾದ ಡೋಪಿಂಗ್ ಪ್ಯಾನೆಲ್ ಮುಂದಿನ ಸೂಚನೆ ನೀಡುವವರೆಗೆ ಮೇಲ್ಮನವಿಯನ್ನು ರದ್ದುಗೊಳಿಸಿದೆ.
ನಾಡಾಗೆ ಮೂತ್ರ ಮಾದರಿಯನ್ನು ನೀಡದೆ ಇದ್ದದ್ದು ಯಾಕೆ ಎಂದು ವಿವರಣೆ ಕೇಳಿ ಜೂನ್ 23ರಂದು ಪುನಿಯಗೆ ನೋಟಿಸ್ ನೀಡಲಾಗಿತ್ತು. ನಂತರ ಸೆಪ್ಟೆಂಬರ್ 20 ಮತ್ತು ಅಕ್ಟೋಬರ್ 4ರಂದು ವಿಚಾರಣೆ ನಡೆಸಲಾಗಿತ್ತು. ಇದೀಗ ಆದೇಶ ಪ್ರಕಟಿಸಿರುವ ಎಡಿಡಿಪಿ ಕಲಂ 10.3.1ರ ಅಡಿಯಲ್ಲಿ ನಿರ್ಬಂಧಗಳಿಗೆ ಅಥ್ಲೀಟ್ ಹೊಣೆಗಾರನಾಗಿರುತ್ತಾನೆ ಮತ್ತು 4 ವರ್ಷಗಳ ಅವಧಿಗೆ ಅನರ್ಹತೆಗೆ ಹೊಣೆಗಾರನಾಗಿರುತ್ತಾನೆ ಎಂದು ಹೇಳಿದೆ. ನಿಷೇಧದ ಅವಧಿಯಲ್ಲಿ ಬಜರಂಗ್ ಪುನಿಯ ಸ್ಪರ್ಧಾತ್ಮಕ ಕುಸ್ತಿಗೆ ಮರಳಲು ಮತ್ತು ವಿದೇಶದಲ್ಲಿ ಕೋಚಿಂಗ್ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ಸಹ ತನ್ನ ಆದೇಶದಲ್ಲಿ ತಿಳಿಸಿದೆ.
ಕೆಲ ತಿಂಗಳ ಹಿಂದೆ ವಿನೇಶ್ ಫೋಗಟ್ ಜೊತೆ ಬಜರಂಗ್ ಪುನಿಯಾ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ನಂತರ ಪುನಿಯ ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರನ್ನಾಗಿ ನೇಮಕಗೊಂಡಿದ್ದಾರೆ. ಇದಕ್ಕೂ ಮುನ್ನ ಅವರು ರೈಲ್ವೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.