ಪುತ್ತೂರು: ಅಡ್ಯನಡ್ಕದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಇಸ್ಲಾಂ ಮತ ಪ್ರವಚನ ನೀಡಿದ ಘಟನೆಯನ್ನು ಖಂಡಿಸಿದ ಹಿಂದೂ ಸಂಘಟನೆಗಳ ಕ್ರಮವನ್ನು ದಾಳಿ ಎಂದು ಸದನದಲ್ಲಿ ಪ್ರಸ್ತಾಪಿಸಿರುವ ಉಳ್ಳಾಲ ಶಾಸಕ ಯು.ಟಿ. ಖಾದರ್ ಅವರ ಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಾನು ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಪ್ರಮುಖರೊಂದಿಗೆ ಮಾತನಾಡಿ, ಘಟನೆಯ ಸತ್ಯಾಸತ್ಯತೆಯನ್ನು ತಿಳಿದುಕೊಂಡಿದ್ದೇನೆ. ಕರಾವಳಿ ಭಾಗದ ಓರ್ವ ಶಾಸಕನಾಗಿ, ಆ ಭಾಗದ ಕಾರ್ಯಕರ್ತರ ಜೊತೆ ತಾನು ಸದಾ ಇರುತ್ತೇನೆ ಎಂದು ತಿಳಿಸಿರುವ ಶಾಸಕ ಸಂಜೀವ ಮಠಂದೂರು ಅವರು, ಘಟನೆಯ ಸತ್ಯಾಸತ್ಯತೆ ಅರಿತುಕೊಳ್ಳದ ಶಾಸಕ ಯು.ಟಿ. ಖಾದರ್ ಅವರು, ಹಿಂದೂ ಸಂಘಟನೆ ಪ್ರಮುಖರ ಮೇಲೆ ಆರೋಪ ಮಾಡಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಆಪಾದಿಸಿದ್ದಾರೆ.
ಕ್ರಮಕ್ಕೆ ಶಾಸಕ ಮಠಂದೂರು ಸೂಚನೆ
ಅಡ್ಯನಡ್ಕದ ಜನತಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ – ವಿದ್ಯಾರ್ಥಿನಿಯರನ್ನು ಹಿಂದೂಗಳ ಪವಿತ್ರ ಹಬ್ಬವಾದ ಶಿವರಾತ್ರಿಯಂದು ಪರೀಕ್ಷಾ ಕೋಚಿಂಗ್ ನೆಪದಲ್ಲಿ ಶಾಲೆಗೆ ಕರೆಸಿರುವ ಪ್ರಾಂಶುಪಾಲರು, ಶಾಲೆಯಿಂದ ದೂರದಲ್ಲಿದ್ದ ಕಟ್ಟಡದಲ್ಲಿ ಇಸ್ಲಾಂ ಸಂಘಟಕರಿಂದ ಮಕ್ಕಳಿಗೆ ಪ್ರವಾದಿಗಳ ಪ್ರವಚನ ನೀಡಿರುತ್ತಾರೆ. ಒಂದು ಧಾರ್ಮಿಕ ಸಂಘಟನೆಯ ವ್ಯಕ್ತಿಯ ಮೂಲಕ ಮತ ಪ್ರವಚನ ಮಾಡಿಸಿರುವ ಕ್ರಮದಿಂದ, ಮಕ್ಕಳ ಮನಸ್ಸಿಗೆ ನೋವುಂಟಾಗಿದೆ. ಈ ಕುರಿತು ಈಗಾಗಲೇ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿದ್ದೇನೆ. ವಿದ್ಯಾರ್ಥಿಗಳನ್ನು ಇಸ್ಲಾಂ ಮತಪ್ರವಚನಕ್ಕೆ ಕಳುಹಿಸಿಕೊಟ್ಟ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಒತ್ತಾಯಿಸಿರುವುದಾಗಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.