ಸಂಸ್ಥೆಯ  ಇತಿಹಾಸವನ್ನು ತಿಳಿದಾಗ ಮಾತ್ರ ಪ್ರಗತಿ ಸಾಧ್ಯ : ಸಂಜೀವ ಮಠoದೂರು

ಉಪ್ಪಿನಂಗಡಿ : ಉಪ್ಪಿನಂಗಡಿ ಬೋರ್ಡ್ ಹೈಸ್ಕೂಲ್ 1957ರಲ್ಲಿ ಸ್ಥಾಪನೆಯಾಗಿದ್ದು ಇಂದು ಪದವಿ ಪೂರ್ವ ವಿಭಾಗವನ್ನು ಹೊಂದಿ  ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ಶೈಕ್ಷಣಿಕ ಸಾಧನೆ, ಕ್ರೀಡೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಮಿಂಚಿದ ಪ್ರತಿಭೆಗಳನ್ನು ಈ ಸಂಸ್ಥೆ ನೀಡಿದೆ. ಶಾಲೆಯ ಸ್ಥಾಪನೆಗೆ ಅಂದು ಭೂದಾನ ಮಾಡಿದ ಬೆನಗಲ್ ಸಹೋದರರು, ನೇತೃತ್ವ ವಹಿಸಿದ ವೇಣುಗೋಪಾಲ್ ನಾಯಕ್, ವಿದ್ಯಾಭಿಮಾನಿಗಳ ಕೊಡುಗೆ ಮತ್ತು  ಅಧ್ಯಾಪಕ ವೃಂದದ  ಶ್ರಮವನ್ನು ಸದಾ ಸ್ಮರಿಸುವ ಅವಶ್ಯಕತೆ ಇದೆಯೆಂದು ಪುತ್ತೂರು ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ  ಮಠoದೂರು ತಿಳಿಸಿದರು.

ಸಂಸ್ಥೆಯ  ಹಿರಿಯ ವಿದ್ಯಾರ್ಥಿಯಾಗಿ ಶಾಲಾ ಅಭಿವೃದ್ಧಿಗೆ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿ ಹಿರಿಯ ವಿದ್ಯಾರ್ಥಿ ಸಂಘವು ಸೌಹಾರ್ದತೆಯಿಂದ  ಕಾರ್ಯನಿರ್ವಹಿಸಿ ರಾಜ್ಯಕ್ಕೆ ಮಾದರಿಯಾಗಿ ಕೀರ್ತಿಯನ್ನು  ತರುವಂತಹ ಸಾಧನೆ ಮಾಡಲಿ  ಎಂದು ಹಾರೈಸಿದರು. ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ  ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿ ಸಂಘದ ರಚನಾ ಸಭೆಯಲ್ಲಿ ಅವರು ಮಾತನಾಡಿದರು.

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ  ಹಿರಿಯ ವಿದ್ಯಾರ್ಥಿ ಸಂಘವನ್ನು ರಚಿಸುವ ಮೂಲಕ  ಸರ್ಕಾರಿ ಶಾಲೆಗಳನ್ನು ಬಲವರ್ಧನ ಗೊಳಿಸುವ ಆಶಯವನ್ನು ಹೊಂದಿದೆ. ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಆಸ್ತಿಯಾಗಿದ್ದು ಪ್ರತಿವರ್ಷದ ವಿದ್ಯಾರ್ಥಿಗಳನ್ನು ವಾಟ್ಸಪ್ ಗುಂಪುಗಳಲ್ಲಿ ಸೇರಿಸುವ, ಸದಸ್ಯತ್ವ ಅಭಿಯಾನದ ಮೂಲಕ ಸಂಸ್ಥೆಯ ಜೊತೆಗಿನ ಸಂಬಂಧವನ್ನು ಹೆಚ್ಚಿಸಬೇಕೆಂದು  ನಿವೃತ್ತ ಉಪಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಾಸ್ತವಿಕ ಮಾತುಗಳಲ್ಲಿ ತಿಳಿಸಿದರು.



































 
 

 ಸಭೆಯಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಗುಣವತಿ, ಸದಸ್ಯರಾದ ಜೆ.ಕೆ ಪೂಜಾರಿ, ಜಯಂತಿ, ಅಬ್ದುಲ್ ಮಜೀದ್, ಅಬೂಬಕ್ಕರ್ ಸಿದ್ದಿಕ್, ಅಬ್ದುಲ್ ರಶೀದ್ ಮಠ, ಖಲಂದರ್ ಶಾಫಿ, ಸಾಮಾಜಿಕ ಮುಂದಾಳು  ಎನ್.ಉಮೇಶ ಶೆಣೈ ರಾಮನಗರ, ರೋಟರಿ ಅಧ್ಯಕ್ಷ ನವೀನ್ ಬ್ರ್ಯಾಗ್ಸ್, ಝಕಾರಿಯ ಕೋಡಿಪ್ಪಾಡಿ, ಚಂದ್ರಶೇಖರ ಮಡಿವಾಳ, ಅಬೂಬಕ್ಕರ್ ಸಿದ್ದೀಕ್ ಹ್ಯಾಪಿ ಟೈಮ್ಸ್, ರಘುರಾಮ, ರಾಜೇಶ್ ರಾಮನಗರ ಮೊದಲಾದ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಸರ್ವಾನುಮತದಿಂದ ಹಿರಿಯ ವಿದ್ಯಾರ್ಥಿ ಸಂಘಕ್ಕೆ  ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪ ಪ್ರಾಂಶುಪಾಲರಾದ ದೇವಕಿ. ಡಿ ಸ್ವಾಗತಿಸಿ, ಹಿರಿಯ ಶಿಕ್ಷಕಿ ಪೂರ್ಣಿಮಾ ನಾಯಕ್ ವಂದಿಸಿದರು. ಶಿಕ್ಷಕ ಲಕ್ಷ್ಮೀಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top