ಗ್ಯಾರಂಟಿಗಳನ್ನು ಪ್ರಶ್ನಿಸಿದರೆ ಶಿಸ್ತುಕ್ರಮದ ಎಚ್ಚರಿಕೆ
ಬೆಂಗಳೂರು : ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗ್ಯಾರಂಟಿಗಳಿಂದಾಗಿ ಅನುದಾನ ಬರುತ್ತಿಲ್ಲ ಎಂದು ಹೇಳುತ್ತಿರುವ ಕಾಂಗ್ರೆಸ್ ಶಾಸಕರ ಬಾಯಿಮುಚ್ಚಿಸಲು ಯತ್ನಿಸಿದ್ದಾರೆ.
ಕಾಂಗ್ರೆಸ್ ಶಾಸಕ ಗವಿಯಪ್ಪ ನಿನ್ನೆ ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ಒಂದೆರಡು ಗ್ಯಾರಂಟಿಗಳನ್ನು ನಿಲ್ಲಿಸಿ ಅಭಿವೃದ್ಧಿಗೆ ಅನುದಾನ ಕೊಡಿ ಎಂದು ಆಗ್ರಹಿಸಿರುವುದು ಕಾಂಗ್ರೆಸ್ ಪಾಲಿಗೆ ತೀವ್ರ ಮುಜುಗರ ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ಕೆಂಡಾಮಂಡಲವಾಗಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಗ್ಯಾರಂಟಿ ವಿರುದ್ಧ ಹೇಳಿಕೆ ನೀಡುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗವಿಯಪ್ಪ ಗ್ಯಾರಂಟಿ ನಿಲ್ಲಿಸಲು ಹೇಳಿಕೆ ನೀಡಿದ್ದರೆ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು. ಯಾರೂ ಗ್ಯಾರಂಟಿಗಳ ಬಗ್ಗೆ ಪ್ರಶ್ನೆ ಎತ್ತಬಾರದು. ಅನರ್ಹರು ಗ್ಯಾರಂಟಿ ಫಲಾನುಭವಿಗಳಾಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಗ್ಯಾರಂಟಿಗಳಿಂದಾಗಿ ಪ್ರತಿ ಕ್ಷೇತ್ರಕ್ಕೆ ಸುಮಾರು 250 ಕೋ. ರೂ. ಹೋಗುತ್ತಿದೆ. ಇದು ಅಭಿವೃದ್ಧಿಯಲ್ಲವೇ ಎಂದು ಕೇಳಿದ್ದಾರೆ.