ನಾಲ್ಕು ರಾಜ್ಯಗಳಲ್ಲಿ ಅತ್ಯಾಚಾರ, ಕೊಲೆಗಳನ್ನು ಮಾಡಿದ್ದ ಪಾತಕಿ
ಅಹ್ಮದಾಬಾದ್ : ಮೂಲ್ಕಿ ರೈಲು ನಿಲ್ದಾಣದ ಸಮೀಪ ರೈಲು ಪ್ರಯಾಣಿಕರೊಬ್ಬರ ಹತ್ಯೆಯೂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಸರಣಿ ಹತ್ಯೆ ಮತ್ತು ಅತ್ಯಾಚಾರಗಳನ್ನು ಮಾಡಿದ್ದ ಸೀರಿಯಲ್ ಕಿಲ್ಲರ್‌ನನ್ನು ಗುಜರಾತ್ ಪೊಲೀಸರು ವಾಪಿ ರೈಲು ನಿಲ್ದಾಣದ ಸಮೀಪ ಭಾನುವಾರ ರಾತ್ರಿ ಬಂಧಿಸಿದ್ದಾರೆ.
ಅತ್ಯಾಚಾರ ಹಾಗೂ ಹಲವು ಕೊಲೆ ಪ್ರಕರಣಗಳಲ್ಲಿ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ಸರಣಿ ಹಂತಕ ಈತ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ಯಾಣದ ರೋಹಟಕ್‌ನ ರಾಹುಲ್ ಜಾಟ್ ಸೆರೆಯಾಗಿರುವ ಸೀರಿಯಲ್ ಕಿಲ್ಲರ್. ವಲ್ಸಾಡ್ ಜಿಲ್ಲೆಯ ಉದ್ವಾಡ ಎಂಬಲ್ಲಿ 19 ವರ್ಷದ ಯುವತಿಯನ್ನು ಸಾಯಿಸಿದ ಪ್ರಕರಣದಲ್ಲಿ ಈತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದರು.
ಯುವತಿಯ ಶವ ಉದ್ವಾಡ ರೈಲು ನಿಲ್ದಾಣದ ಸಮೀಪವಿರುವ ಹಳಿಯ ಮೇಲೆ ನವೆಂಬರ್ 14ರಂದು ಪತ್ತೆಯಾಗಿತ್ತು. ಆಕೆ ಟ್ಯೂಷನ್ನಿಂದ ಮನೆಗೆ ಹಿಂದಿರುತ್ತಿದ್ದಾಗ ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿ ಶವವನ್ನು ಎಸೆದು ಹೋಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಲ್ಸಾಡ್‌ನ ವಾಪಿ ರೈಲ್ವೇ ನಿಲ್ದಾಣದ ಪಾರ್ಕಿಂಗ್ ಪ್ರದೇಶದಿಂದ ಸ್ಥಳೀಯ ಮತ್ತು ರೈಲ್ವೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಾಹುಲ್ ಜಾಟ್‌ನನ್ನು ಬಂಧಿಸಲಾಗಿದೆ. ಜಾಟ್ ಪದೇಪದೆ ತಾನಿರುವ ಸ್ಥಳವನ್ನು ಬದಲಾಯಿಸುತ್ತಿದ್ದ. ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ರೈಲುಗಳು ಮತ್ತು ರೈಲು ನಿಲ್ದಾಣಗಳಲ್ಲಿ ಲೂಟಿ ಮತ್ತು ಕೊಲೆ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ. ಈತ ಹೆಚ್ಚಾಗಿ ರೈಲು ಪ್ರಯಾಣಿಕರನ್ನು ಗುರಿಮಾಡಿಕೊಂಡು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ.
ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಸೋಲಾಪುರ ರೈಲು ನಿಲ್ದಾಣದ ಬಳಿ ರೈಲಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಹೌರಾ ರೈಲು ನಿಲ್ದಾಣದ ಬಳಿ ಕತಿಹಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ವೃದ್ಧರೊಬ್ಬರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಮೂಲ್ಕಿಯಲ್ಲಿ ರೈಲು ಪ್ರಯಾಣಿಕನನ್ನು ಹತ್ಯೆ ಮಾಡಿದ್ದ ವಿಚಾರವನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.