ಇಮ್ರಾನ್ ಖಾನ್ ಬೆಂಬಲಿಗರಿಂದ ಇಸ್ಲಾಮಾಬಾದ್ ಚಲೋ- ಐವರು ಪೊಲೀಸರು ಬಲಿ
ಇಸ್ಲಾಮಾಬಾದ್: ಬಾಂಗ್ಲಾದೇಶದ ಬಳಿಕ ಈಗ ಇನ್ನೊಂದು ನೆರೆರಾಷ್ಟ್ರ ಪಾಕಿಸ್ಥಾನದಲ್ಲೂ ಆಂತರಿಕ ದಂಗೆ ಶುರುವಾಗಿದೆ. ಮಾಜಿ ಪ್ರಧಾನಿ ಪ್ರಸ್ತುತ ಜೈಲಿನಲ್ಲಿರುವ ಇಮ್ರಾನ್ ಖಾನ್ ಪಕ್ಷದ ಸಾವಿರಾರು ಬೆಂಬಲಿಗರು ರಾಜಧಾನಿ ಇಸ್ಲಾಮಾಬಾದ್‌ನತ್ತ ಮೋರ್ಚಾ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಉಂಟಾದ ಘರ್ಷಣೆಯಲ್ಲಿ ಐವರು ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಮತ್ತು ನೂರಾರು ಮಂದಿ ಪ್ರತಿಭಟನೆಕಾರರು ಗಾಯಗೊಂಡಿದ್ದಾರೆ.
ಇಮ್ರಾನ್ ಖಾನ್ ಅವರ ಹೆಂಡತಿ ಬುಶ್ರಾ ಬೀಬಿ ಖಾನ್ ನೇತೃತ್ವದಲ್ಲಿ ನಡೆಯುತ್ತಿರುವ ಮೋರ್ಚಾ ಭಾನುವಾರ ಶುರುವಾಗಿದ್ದು, ಸೋಮವಾರ ಸಂಜೆ ಇಸ್ಲಾಮಾಬಾದ್‌ನ ಹೊರವಲಯ ತಲುಪಿದೆ. ಅಲ್ಲಿ ಭದ್ರತಾ ಸಿಬ್ಬಂದಿ ತಡೆದಾಗ ಘರ್ಷಣೆ ಉಂಟಾಗಿದೆ. ಇದರ ನಡುವೆಯೂ ಇಂದು ಬೆಳಗ್ಗೆ ಪ್ರತಿಭಟನೆಕಾರರು ಇಸ್ಲಾಮಾಬಾದ್‌ನತ್ತ ಮುಂದುವರಿದಿದ್ದಾರೆ. ಅನೇಕ ಪ್ರಮುಖ ಸರಕಾರಿ ಕಾರ್ಯಾಲಯಗಳು ಇರುವ ಡಿ ಚೌಕ್‌ನತ್ತ ನುಗ್ಗುವುದು ಅವರ ಉದ್ದೇಶವಾಗಿದೆ. ಆದರೆ ಅವರನ್ನು ತಡೆಯಲು ಪಾಕ್ ಸರಕಾರ ಸೇನೆಯನ್ನು ರಂಗಕ್ಕಿಳಿಸಿದೆ.
ಓರ್ವ ಪೊಲೀಸ್ ಅಧಿಕಾರಿಯನ್ನು ಪ್ರತಿಭಟನೆಕಾರರು ಗುಂಡಿಕ್ಕಿ ಕೊಂದಿದ್ದಾರೆ. ಉಳಿದ ನಾಲ್ವರು ಪ್ರತಿಭಟನೆಕಾರರ ವಾಹನಗಳಡಿಗೆ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರತಿಭಟನೆಕಾರರ ಬಳಿ ಬಂದೂಕು, ಲಾಠಿ, ತಲವಾರುಗಳಂಥ ಮಾರಕಜಾಯುಧಗಳಿವೆ. ಅವರು ನಿರ್ದಿಷ್ಟ ಉದ್ದೇಶದಿಂದಲೇ ಬಂದಿದ್ದಾರೆ ಎನ್ನಲಾಗಿದೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷ ಸೋತಿದೆ. ಆದರೆ ಇದನ್ನು ʼಕದ್ದ ಜನಾದೇಶʼ ಎಂದು ಹೇಳಿ ಇಮ್ರಾನ್ ಖಾನ್ ಪ್ರತಿಭಟನೆ ಶುರು ಮಾಡಿದಾಗ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ. ಬಳಿಕ ಅವರ ಹೆಂಡತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಭಾನುವಾರದಿಂದ ಅಂತಿಮ ಸಂಘರ್ಷ ನಡೆಸಲು ಇಮ್ರಾನ್ ಖಾನ್ ಕರೆಕೊಟ್ಟ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಇಸ್ಲಾಮಾಬಾದ್‌ನತ್ತ ನುಗ್ಗುತ್ತಿದ್ದಾರೆ.
ಓರ್ವ ಪೊಲೀಸ್ ಆಧಿಕಾರಿ ಗುಂಡೇಟಿಗೆ ಬಲಿಯಾಗಿ ನಾಲ್ಕು ಮಂದಿ ಪ್ರತಿಭಟನೆಕಾರರು ವಾಹನದಡಿ ಬಿದ್ದು ಸತ್ತಿರುವುದನ್ನು ಸರಕಾರ ದೃಢಪಡಿಸಿದೆ. 119 ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನೆಕಾರರು ಸುಮಾರು 30 ಪೊಲೀಸ್ ವಾಹನಗಳಿಗೆ ಬೆಂಕಿಹಚ್ಚಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಉಸ್ಮಾನ್ ಅನ್ವರ್ ತಿಳಿಸಿದ್ದಾರೆ.