ಇಂಜಿನಿಯರನ್ನು ಭಿಕ್ಷುಕನನ್ನಾಗಿ ಮಾಡಿದ್ದು ಬದುಕಿನ ಆ ಒಂದು ಆಘಾತಕಾರಿ ಘಟನೆ
ಬೆಂಗಳೂರು: ಜರ್ಮನಿಯಲ್ಲಿ ಇಂಜಿನಿಯರಿಂಗ್ ಕಲಿತು, ಫ್ರಾಂಕ್‌ಫರ್ಟ್‌ನಲ್ಲಿ ಆರಂಕಿಯ ಸಂಬಳ ಪಡೆಯುತ್ತಿದ್ದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಈಗ ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿರುವ ವೀಡಿಯೊ ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಕೆಂಪು ಬಣ್ಣದ ಹಳೆಯ ಟಿಶರ್ಟ್ ಮತ್ತು ಹರಕು ಜೀನ್ಸ್ ಪ್ಯಾಂಟ್ ಧರಿಸಿ ಕುರುಚಲು ಗಡ್ಡ ಬಿಟ್ಟು ಕಂಡೋರಿಗೆಲ್ಲ ಕೈಚಾಚಿ ಭಿಕ್ಷೆ ಕೇಳುತ್ತಿದ್ದ ಈ ವ್ಯಕ್ತಿಯನ್ನು ಶರತ್ ಯುವರಾಜ್ ಎಂಬವರು ಕುತೂಹಲದಿಂದ ಮಾತನಾಡಿಸಿದಾಗ ಆತನ ವಿಚಾರ ಗೊತ್ತಾಗಿದೆ.
ಶರತ್ ಯುವರಾಜ್ ಈ ವೀಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಷೇರ್ ಮಾಡಿಕೊಂಡಾಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀನು ಏನು ಕಲಿತಿದ್ದೀಯಾ ಎಂದು ಶರತ್ ಕೇಳಿದಾಗ ಆ ಭಿಕ್ಷುಕ ನಾನು ಇಂಜಿನಿಯರ್, ಜರ್ಮನಿಯಲ್ಲಿ ಕಲಿತು ಅಲ್ಲೇ ಫ್ರಾಂಕ್‌ಫರ್ಟ್‌ನಲ್ಲಿ ಉದ್ಯೋಗದಲ್ಲಿದ್ದೆ ಎಂದು ಉತ್ತರಿಸಿದ್ದಾನೆ. ಜರ್ಮನಿಯ ಉದ್ಯೋಗ ತೊರೆದು ಬೆಂಗಳೂರಿಗೆ ಬಂದು ಹೆತ್ತವರ ಜೊತೆಗಿದ್ದ ಈತ ಬೆಂಗಳೂರಿನ ಗ್ಲೋಬಲ್ ವಿಲೇಜ್‌ನಲ್ಲಿ ಐಟಿ ಕಂಪನಿಯೊಂದರಲ್ಲಿ ಉನ್ನತ ಉದ್ಯೋಗಕ್ಕೆ ಸೇರಿದ್ದ.
ಪ್ರೀತಿಸಿದ ಹುಡುಗಿ ಕೈಕೊಟ್ಟ ಬೆನ್ನಿಗೆ ತಂದೆ ತಾಯಿ ಮೃತಪಟ್ಟಾಗ ಮಾನಸಿಕ ಆಘಾತಕ್ಕೊಳಗಾಗದ ಆತ ಬಳಿಕ ದುಃಖ ಮರೆಯಲು ಕುಡಿತದ ಮೊರೆ ಹೋಗಿದ್ದ. ಅದು ಚಟವಾಗಿ ಬದಲಾಗಿ ಸರಿಯಾಗಿ ನೌಕರಿ ಮಾಡದಾಗ ಕಂಪನಿ ಕಿತ್ತುಹಾಕಿತ್ತು. ಕೊನೆಗೆ ಆಸ್ತಿಯೆಲ್ಲ ಕರಗಿ ಮನೆ ಮಾರಿಹೋದಾಗ ತುತ್ತು ಅನ್ನಕ್ಕಾಗಿ ಆತ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದ್ದಾನೆ. ಹೆಚ್ಚಾಗಿ ಜಯನಗರದ ಆಸುಪಾಸಿನಲ್ಲೇ ಈತ ಭಿಕ್ಷೆ ಬೇಡುತ್ತಿರುತ್ತಾನೆ. ಎನ್‌ಜಿಒಗಳಿಗೆ ಈತನ ವಿಷಯ ತಿಳಿಸಿ ಆಶ್ರಯ ಕೊಡಲು ಕೇಳಿಕೊಂಡರೂ ಯಾರೂ ಪ್ರತಿಸ್ಪಂದಿಸಿಲ್ಲ. ಪೊಲೀಸರು ಮತ್ತು ವೈದ್ಯರ ಮೂಲಕ ಬಂದರೆ ಈತನನ್ನು ಪರಿಗಣಿಸಬಹುದು, ಇಲ್ಲದಿದ್ದರೆ ನಾಳೆ ಏನಾದರೂ ಸಮಸ್ಯೆಯಾದರೆ ನೂರಾರು ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆ ಎಂದು ಎನ್‌ಜಿಒಗಳು ಹೇಳುತ್ತಿವೆ.