ಕೋಲಾಹಲ ಎಬ್ಬಿಸಲಿರುವ ವಕ್ಫ್ ಮಸೂದೆ, ಅದಾನಿ ಕೇಸ್
ಹೊಸದಿಲ್ಲಿ : ಸಂಸತ್‌ನ ಚಳಿಗಾಲದ ಅಧಿವೇಶನ ಇಂದಿನಿಂದ ಶುರುವಾಗಿ ಡಿಸೆಂಬರ್ 20ರವರೆಗೆ ನಡೆಯಲಿದೆ. ವಕ್ಫ್ ಮಸೂದೆ, ಅದಾನಿ ಅರೆಸ್ಟ್ ವಾರಂಟ್ ಮತ್ತಿತರ ವಿಚಾರಗಳು ಅಧಿವೇಶನದಲ್ಲಿ ಕೋಲಾಹಲ ಎಬ್ಬಿಸಲಿವೆ.
ಸರ್ಕಾರವು ವಕ್ಫ್ ತಿದ್ದುಪಡಿ ಮಸೂದೆ ಸೇರಿದಂತೆ 16 ಮಸೂದೆಗಳನ್ನು ಮಂಡಿಸಲು ಪಟ್ಟಿ ಮಾಡಿದೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ, ಲಂಚದ ಆರೋಪದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಯುಎಸ್ ನ್ಯಾಯಾಲಯದಿಂದ ದೋಷಾರೋಪಣೆ ವಿಷಯಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ. ಇದಕ್ಕೆ ಪ್ರತಿಯಾಗಿ ಸರಕಾರ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಮಂಡಿಸಲು ಸಿದ್ಧವಾಗಿದೆ.
ಬ್ಯಾಂಕಿಂಗ್ ನಿಯಮಗಳನ್ನು ಸುಧಾರಿಸಲು ಸರ್ಕಾರ ಮತ್ತೊಂದು ದೊಡ್ಡ ಹೆಜ್ಜೆಯನ್ನು ಇಡುವ ನಿರೀಕ್ಷೆಯಿದೆ. ವಕ್ಫ್ (ತಿದ್ದುಪಡಿ) ಮಸೂದೆ ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ ಸೇರಿದಂತೆ ಎಂಟು ಮಸೂದೆಗಳು ಲೋಕಸಭೆಯಲ್ಲಿ ಬಾಕಿ ಉಳಿದಿವೆ. ಲೋಕಸಭೆಯ ಬುಲೆಟಿನ್ ಪ್ರಕಾರ ರಾಜ್ಯಸಭೆಯಲ್ಲಿ ಎರಡು ಮಸೂದೆಗಳು ಬಾಕಿ ಉಳಿದಿವೆ.
ಅಧಿವೇಶನಕ್ಕೂ ಮುನ್ನ ಸರ್ಕಾರ ಭಾನುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಿದ್ದು, ಸಂಸತ್ತಿನ ಸುಗಮ ಕಲಾಪವನ್ನು ಖಚಿತಪಡಿಸಿಕೊಳ್ಳಲು ಸಹಕರಿಸುವಂತೆ ಎಲ್ಲ ಪಕ್ಷಗಳಿಗೆ ಮನವಿ ಮಾಡಿದೆ. ವಿಪಕ್ಷ ಇಂಡಿಯಾ ಬ್ಲಾಕ್ ಪಕ್ಷಗಳ ಸಂಸದರು ಸಂಸತ್ ಭವನದಲ್ಲಿ ಬೆಳಗ್ಗೆ ಸಭೆ ನಡೆಸಿ ಅಧಿವೇಶನ ಪ್ರಾರಂಭವಾಗುವ ಮೊದಲು ಪ್ರತಿಪಕ್ಷಗಳ ಕಾರ್ಯತಂತ್ರವನ್ನು ಅಂತಿಮಗೊಳಿಸಲಿದ್ದಾರೆ.