ಬಡವರಾ, ಶ್ರೀಮಂತರಾ ಎಂದು ಪರಿಶೀಲಿಸಲಿರುವ ಅಧಿಕಾರಿಗಳು
ಬೆಂಗಳೂರು : ಬಿಪಿಎಲ್ ಕಾರ್ಡ್ ರದ್ದತಿಯಿಂದ ಉಂಟಾಗಿರುವ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಇಂದಿನಿಂದ ಅಧಿಕಾರಿಗಳು ರಾಜ್ಯಾದ್ಯಂತ ಪಡಿತರ ಕಾರ್ಡ್‌ಗಳ ಪರಿಶೀಲನೆ ಪ್ರಕ್ರಿಯೆ ಪ್ರಾರಂಭಿಸಲಿದ್ದಾರೆ. ಅರ್ಹ ಫಲಾನುಭವಿಗಳ ಕಾರ್ಡ್‌ಗಳು ಮತ್ತೆ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸರ್ಹತೆಯನ್ನು ದೃಢಪಡಿಸಿಕೊಳ್ಳುವ ಸಲುವಾಗಿ ಕಾರ್ಡ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಆಧಾರ್, ಪ್ಯಾನ್ ಕಾರ್ಡ್, ಐಟಿ ರಶೀದಿ ಮುಂತಾದ ದಾಖಲೆಗಳ ಮೂಲಕ ಕಾರ್ಡ್ ರದ್ದಾದವರು ತಮ್ಮ ಕಾರ್ಡ್‌ಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅರ್ಹರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡದಂತೆ ಈಗಾಗಲೇ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದರು. ಒಂದು ವೇಳೆ ಅರ್ಹ ಫಲಾನುಭವಿಗಳ ಕಾರ್ಡ್ ರದ್ದುಗೊಂಡಿದ್ದರೆ ಮತ್ತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ನಾವು ಬಡವರ ಅನ್ನ ಕಿತ್ತುಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದರು. ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅರ್ಹರ ಕಾರ್ಡ್‌ಗಳು ರದ್ದುಗೊಂಡಿದ್ದರೆ ಒಂದು ವಾರದೊಳಗೆ ಸರಿಪಡಿಸುವುದಾಗಿ ಹೇಳಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಆಹಾರ ಇಲಾಖೆ ಪಡಿತರ ಚೀಟಿಗಳ ಪರಿಷ್ಕರಣೆ ಮತ್ತು ತಿದ್ದುಪಡಿ ಆರಂಭಿಸುತ್ತಿದೆ. ರಾಜ್ಯದೆಲ್ಲೆಡೆ ರದ್ದಾಗಿರುವ ಬಿಪಿಎಲ್ ಕಾರ್ಡ್‌ಗಳ ತಿದ್ದುಪಡಿ ಕಾರ್ಯ ನಡೆಯಲಿದೆ. ಆಧಾರ್, ಪ್ಯಾನ್ ಕಾರ್ಡ್, ಐಟಿ ರಶೀದಿ ಮೂಲಕ ಅರ್ಹತೆ ಹೊಂದಿರುವವರು ಕಾರ್ಡ್‌ಗಳನ್ನು ಸರಿ ಪಡಿಸಿಕೊಳ್ಳಬಹುದು.
ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸರ್ಕಾರಿ ನೌಕರರೇ, ತೆರಿಗೆ ಪಾವತಿದಾರರೇ ಎಂಬುದನ್ನು ಪರಿಶೀಲಿಸಬೇಕು. ಕಾರ್ಡ್ ಹೊಂದಿರುವವರು ಬಡವರಾ? ಶ್ರೀಮಂತರಾ ಎಂದು ಮನೆಗೆ ಹೋಗಿ ಪರಿಶೀಲಿಸಬೇಕು. ಸ್ಥಳ ಪರಿಶೀಲನೆ ಜೊತೆಗೆ ದಾಖಲೆ ಪರಿಶೀಲನೆ ಮಾಡಬೇಕು. ನಂತರ ಅರ್ಹರಾ ಅನರ್ಹರಾ ಎಂದು ತೀರ್ಮಾನಿಸಿ ಕಾರ್ಡ್‌ಗಳನ್ನು ಸರಿಪಡಿಸಲಾಗುತ್ತದೆ. ಎನ್‌ಐಸಿ ಸಾಫ್ಟ್‌ವೇರ್ ಮೂಲಕ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ್ ಎಪಿಎಲ್‌ಗೆ ಅಥವಾ ಎಪಿಎಲ್‌ನಿಂದ ಬಿಪಿಎಲ್‌ಗೆ ಬದಲಾಯಿಸಬೇಕು. ಕಾರ್ಡ್ ಬದಲಿಸಲು ಕನಿಷ್ಠ 10ರಿಂದ 15 ದಿನ ಹಿಡಿಯಬಹುದು ಎನ್ನಲಾಗುತ್ತಿದೆ.