ಪುತ್ತೂರು: ಕ್ಯಾಂಪ್ಕೋ ಪುತ್ತೂರು ಶಾಖೆಯ ನವೀಕೃತ ಕಚೇರಿ ಉದ್ಘಾಟನೆ ಶ್ರೀ ಮಹಾಮಾಯಿ ದೇವಸ್ಥಾನದ ಬಳಿಯ ಕಟ್ಟಡದಲ್ಲಿ ನಡೆಯಿತು.
ಶಾಖೆಯನ್ನು ಹಿರಿಯ ಸದಸ್ಯ ಬೆಳೆಗಾರರಾದ ಎನ್. ಎಸ್. ಹರಿಹರ್ ರಾವ್ ಕೊಡಿಪ್ಪಾಡಿ, ಸುರೇಶ್ ಬಲ್ನಾಡು, ಬಿ. ಟಿ. ನಾರಾಯಣ ಭಟ್, ಕೆ. ಟಿ. ಭಟ್ ಉದ್ಘಾಟಿಸಿದರು.
ಸದಸ್ಯರ ಬೇಡಿಕೆಯಂತೆ ಸಣ್ಣ ಮಟ್ಟದ ಮಣ್ಣು ತಪಾಸಣೆ ಯಂತ್ರವನ್ನು ಕ್ಯಾಂಪ್ಕೊ ಖರೀದಿಸಿದ್ದು, ಈ ಮೊಬೈಲ್ ಸಾಯಿಲ್ ಟೆಸ್ಟ್ ಯಂತ್ರವನ್ನು ಪುತ್ತೂರಿನಲ್ಲಿ ಇರಿಸಿ ಬೆಳೆಗಾರರ ಬಳಕೆಗೆ ಲಭ್ಯವಾಗುವಂತೆ ಮಾಡಲಾಗುವುದು. 1.45 ಲಕ್ಷ ಸದಸ್ಯರಿದ್ದು, ಎಲ್ಲರ ಹಿತಕಾಯುವ ನಿಟ್ಟಿನಲ್ಲಿ ಕ್ಯಾಂಪ್ಕೋ ಆಡಳಿತ ಮಂಡಳಿ ಬದ್ಧವಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಮಹಮಾಯಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನುಷ್ಯ ಆಕ್ರಮಣದಿಂದ ಕಾಡು ಪ್ರಾಣಿಗಳು ನಾಡಿನತ್ತ ಬರುವುದು ಹೆಚ್ಚಾಗುತ್ತಿದೆ. ಮಂಗನಿಗೆ ಮಂಕಿ ಪಾರ್ಕ್, ಸಂತಾನ ಹರಣ ಚಿಕಿತ್ಸೆ ಮಾಡುವ ಘೋಷಣೆ ಸರಕಾರದಿಂದ ನಡೆದಿದ್ದು, ಕಾರ್ಯಗತವಾಗಿಲ್ಲ. ಕೋತಿಯನ್ನು ಅಂಡಮಾನ್ ದ್ವೀಪಕ್ಕೆ ಬಿಟ್ಟು ಬರುವಂತೆ ಸರಕಾರಕ್ಕೆ ಮನವಿ ನೀಡುವ ಕಾರ್ಯವಾಗಿದೆ. ರೈತರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ವಿಜ್ಞಾನಿಗಳ ಜತೆ ಕೊಂಡಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸಿಪಿಸಿಆರ್‍ಐ ನಿರ್ದೇಶಕರಲ್ಲಿ ಈಗಾಗಲೇ ಮಾತುಕತೆ ಮಾಡಲಾಗಿದೆ. ಕೊಬ್ಬರಿಯ ಜತೆಗೆ ತೆಂಗಿನಕಾಯಿ ಖರೀದಿಸುವ ಚಿಂತನೆಯಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕರಾದ ಎಸ್. ಆರ್. ಸತೀಶ್ಚಂದ್ರ, ಕೃಷ್ಣ ಪ್ರಸಾದ್ ಮಡ್ತಿಲ, ಕೆ. ಬಾಲಕೃಷ್ಣ ರೈ, ಜಯರಾಮ ಸರಳಾಯ, ಜಯಪ್ರಕಾಶ್ ನಾರಾಯಣ ಟಿ. ಕೆ., ರಾಧಾಕೃಷ್ಣನ್ ಕೆ., ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ ಪಿ., ಜನರಲ್ ಮ್ಯಾನೇಜರ್ ರೇಶ್ಮಾ ಮಲ್ಯ, ಡಿ.ಜಿ.ಎಂ. ಪರಮೇಶ್ವರ್, ಎ.ಆರ್.ಡಿ.ಎಫ್. ವಿಜ್ಞಾನಿ ಕೇಶವ ಭಟ್ ಮೊದಲಾದವರು ಉಪಸ್ಥಿತರಿದ್ದರು.
ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಸ್ವಾಗತಿಸಿ, ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ವಿ. ಸತ್ಯನಾರಾಯಣ ಪ್ರಸ್ತಾವನೆಗೈದರು. ಮಾರುಕಟ್ಟೆ ವಿಭಾಗ ಮುಖ್ಯಸ್ಥ ಗೋವಿಂದ ಭಟ್ ವಂದಿಸಿದರು. ಶಾಖಾ ಮ್ಯಾನೇಜರ್ ನಿತಿನ್ ಕೊಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.
ಕೊಕ್ಕೋ ಬ್ರ್ಯಾಂಡ್ ಮಾಡಿ, ದರ ಏರಿಸಿ:
ಕೊಕ್ಕೋಗೆ ಸಾಕಷ್ಟು ಬೇಡಿಕೆ ಇದೆ. ಜಾಗತಿಕ ಮಟ್ಟದಲ್ಲೇ ಕೊಕ್ಕೋ ಕೊರತೆ ಇದೆ. ಕೊಕ್ಕೋ ಉತ್ಪನ್ನಗಳಿಗೆ ಸಮರ್ಪಕ ಪೂರೈಕೆ ಆಗುತ್ತಿಲ್ಲ. ಹಾಲಿ ಕ್ಯಾಂಪ್ಕೋ ಮೂಲಕ ಹಸಿ ಕೊಕ್ಕೋಗೆ ನೀಡಲಾಗುತ್ತಿರುವ 115 ರೂ. ದರ ಏನೂ ಸಾಲದು. ಕನಿಷ್ಟ ರೂ. 250 ದರವಾದರೂ ನೀಡಬೇಕು. ಕೊಕ್ಕೋವನ್ನು ಅಡಿಕೆಗೆ ಪರ್ಯಾಯವಾಗಿ ಉತ್ತೇಜಿಸಬೇಕು. ಕೊಕ್ಕೋವನ್ನು ಕ್ಯಾಂಪ್ಕೋ ಬ್ರ್ಯಾಂಡ್ ಮಾಡಬೇಕು ಎಂದು ಸದಸ್ಯ ಬೆಳೆಗಾರ ರಾಮ ಭಟ್ ಬಂಗಾರಡ್ಕ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಕ್ಯಾಂಪ್ಕೋಗೆ ವರ್ಷಕ್ಕೆ 600-800 ಟನ್ ಕೊಕ್ಕೋ ಬೇಕು. ಸದ್ಯಕ್ಕೆ ಅಂಧ್ರದಿಂದ ಕೊಕ್ಕೋ ನಾವು ತೆಗೆದುಕೊಳ್ಳಲೇ ಬೇಕು. ಇಲ್ಲದಿದ್ದರೆ ಕಾರ್ಖಾನೆಯನ್ನು ಮುಚ್ಚಬೇಕಷ್ಟೇ. ಶಿರಸಿ, ಶಿವಮೊಗ್ಗ, ಉಡುಪಿ ಮೊದಲಾದ ಕಡೆಗಳಲ್ಲಿ ಕೊಕ್ಕೋ ಬೆಳೆ ಇಲ್ಲ. ಸುಳ್ಯದಲ್ಲಿ ಮಾತ್ರ ಹೆಚ್ಚು ಲಭ್ಯವಿದೆ. ಮುಂದಿನ ದಿನಗಳಲ್ಲಿ ಕೊಕ್ಕೋ ಪರ ಕ್ಯಾಂಪ್ಕೋ ಇನ್ನಷ್ಟು ಕೆಲಸ ಮಾಡಲಿದೆ ಎಂದು ಹೇಳಿದರು.