ಪುತ್ತೂರು: ಸುಸ್ತಿಯಾದ ಬೆಳೆಸಾಲದ ಬಡ್ಡಿಯನ್ನು ಮನ್ನಾ ಮಾಡದಿರುವುದರಿಂದ ದ.ಕ.ಜಿಲ್ಲೆಯ 731 ಮಂದಿ ರೈತರು ಅವಕಾಶ ವಂಚಿತರಾಗಿದ್ದು, ಈ ರೈತರ ರೂ. 14 ಕೋಟಿಯಷ್ಟು ಬಡ್ಡಿ ಮತ್ತು ಚಕ್ರಬಡ್ಡಿಯನ್ನು ಮನ್ನಾ ಮಾಡಲು ಸರ್ಕಾರ ಗಮನ ಹರಿಸಬೇಕು. ಜಿಲ್ಲೆಯ ಶಾಸಕರುಗಳು ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ರೈತರ ಧ್ವನಿಯಾಗಬೇಕು ಎಂದು ಎಸ್‍ಡಿಪಿಐ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿನ್ ಅವರು ಆಗ್ರಹಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಮಾತನಾಡಿ, ರಾಜ್ಯದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ಸಹಕಾರ ಸಂಘಗಳ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಮಧ್ಯಮ ಮತ್ತು ದೀರ್ಘಾವಧಿ ಸಾಲದ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಿರುವುದರಿಂದ ಅನೇಕ ರೈತರು ಸಾಲ ಮುಕ್ತರಾಗಿರುತ್ತಾರೆ. ಆದರೆ ಬೆಳೆಸಾಲದ ಬಡ್ಡಿ ಹಾಗೂ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಿಲ್ಲ.ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿಯೇ ರೈತರು ಅವಕಾಶ ವಂಚಿತರಾಗುವಂತಾಗಿದೆ ಎಂದು ಆರೋಪಿಸಿದರು.
ಬೆಳೆ ಸಾಲಕ್ಕೆ ಬಡ್ಡಿ ವಿಧಿಸಲಾಗುತ್ತಿಲ್ಲ ಎಂಬ ಅಧಿಕಾರಿಗಳ ಹೇಳಿಕೆ ಸರಿಯಾಗಿಯೇ ಇದೆ. ಆದರೆ ಬೆಳೆಸಾಲದ ಬಡ್ಡಿ ಅಥವಾ ಮೊತ್ತವನ್ನು ಮರುಪಾವತಿಸಲು ಒಂದು ದಿನ ವಿಳಂಬವಾದರೂ ಶೇ.13 ಬಡ್ಡಿ ಬೀಳುತ್ತಿದೆ. ಈ ವಿಚಾರ ಅಧಿಕಾರಿಗಳಿಗೆ ತಿಳಿದಿದ್ದರೂ ಸರ್ಕಾರದ ಗಮನಕ್ಕೆ ತಾರದೇ ಇರುವುದರಿಂದ ದ.ಕ.ಜಿಲ್ಲೆಯ 731 ಮಂದಿ ಹಾಗೂ ಉಡುಪಿ ಜಿಲ್ಲೆಯ 231 ಮಂದಿ ರೈತರು ಅವಕಾಶ ವಂಚಿತರಾಗಿದ್ದಾರೆ.ಬೇರೆ ಯಾವುದೇ ಸಾಲ ಮಾಡಲು ಸಾಧ್ಯವಾಗದೆ, ಬಡ್ಡಿಯನ್ನೂ ಪಾವತಿಸಲಾಗದೆ ಹಲವು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‍ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಎ.ಕೆ, ಉಪಾಧ್ಯಕ್ಷ ಅಶ್ರಫ್ ಬಾವು,ಜಿಲ್ಲಾ ಸಮಿತಿ ಸದಸ್ಯ ಇಬ್ರಾಹಿಂ ಸಾಗರ್ ಉಪಸ್ಥಿತರಿದ್ದರು.