ಹಿರಿಯ ಸಾಹಿತಿ, ಯಕ್ಷಗಾನ ಅರ್ಥದಾರಿ ಅಂಬಾತನಯ ಮುದ್ರಾಡಿ ಇನ್ನಿಲ್ಲ

ಪುತ್ತೂರು: ಹಿರಿಯ ಸಾಹಿತಿ, ಯಕ್ಷಗಾನ ಅರ್ಥದಾರಿ, ನಾಟಕಕಾರ, ಪ್ರಸಂಗಕರ್ತ, ನಿವೃತ್ತ ಪ್ರಾಧ್ಯಾಪಕ ಅಂಬಾತನಯ ಮುದ್ರಾಡಿ ಎಂದೇ ಪ್ರಸಿದ್ಧರಾಗಿದ್ದ ಕೇಶವ ಶೆಟ್ಟಿಗಾರ ಅವರು ಇಂದು ನಿಧನರಾದರು. ಅವರಿಗೆ 85 ವರ್ಷವಾಗಿತ್ತು. ವಯೋ ಸಹಜ ಅಸೌಖ್ಯದಿಂದ ಇದ್ದ ಇವರು ಇಂದು ಬೆಳಿಗ್ಗೆ ಮುದ್ರಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ಬಹುಮುಖ ಪ್ರತಿಭೆಯ ಮುದ್ರಾಡಿ ಅವರು ಕೈಯಾಡಿಸದ ಕ್ಷೇತ್ರವಿಲ್ಲ. ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿದ್ದ ಅವರು ಸಾಹಿತ್ಯ ಕ್ಷೇತ್ರದ ಎಲ್ಲ ವಿಭಾಗಗಳಲ್ಲಿ ಕೈಯಾಡಿಸಿದರೂ ಕಾವ್ಯ ಅವರಿಗೆ ವಿಶೇಷವಾಗಿ ಒಲಿದಿತ್ತು. ಯಕ್ಷಗಾನ, ನಾಟಕ, ರಂಗಗಳಲ್ಲು ಅವರು ಮಿಂಚಿದ್ದಾರೆ. ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು. ಕೊನೆಗಾಲದವರೆಗೂ ಬಹಳ ಸಕ್ರಿಯವಾಗಿ ಅವರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಅಂಬಾತನಯ ಮುದ್ರಾಡಿ ಅವರು 1935ರ ಜೂನ್ 4ರಂದು ಜನಿಸಿದರು. ಅವರ ಶಾಲಾ ವಿದ್ಯಾಭ್ಯಾಸ ಎಂಟನೆಯ ತರಗತಿಯವರೆಗೆ ಆದರೂ ಅವರ ಲೋಕಜ್ಞಾನ ವಿಶೇಷವಾದುದು. ಸ್ವಂತ ಆಸಕ್ತಿಯಿಂದ ಅಧ್ಯಯನ ಮಾಡಿ ಬೆಳೆದ ವ್ಯಕ್ತಿತ್ವ ಅಂಬಾತನಯರದು.





























 
 

ಅಂಬಾತನಯ ಮುದ್ರಾಡಿ ಅವರ ವಿಹಾರವಾಟಿಕೆ 1960ರಲ್ಲಿ ಪ್ರಕಟಗೊಂಡಿತು, ಇದು ಚತುರ್ದಶ ಪಥಗಳ (ಸಾನೆಟ್‌ಗಳ) ಸಂಕಲನ. ಇದು ಇವರ ಮೊತ್ತಮೊದಲ ಪ್ರಕಟಿತ ಕೃತಿ. ಇದಕ್ಕೆ ಮುನ್ನುಡಿ ಬರೆದವರು ರಾಷ್ಟ್ರಕವಿ ಎಂ. ಗೋವಿಂದ ಪೈಗಳು. ಇವರ ಪರಿತ್ಯಕ್ತ ನಾಟಕಕ್ಕೆ (1992) ಮುನ್ನುಡಿ ಬರೆದವರು ಸೇಡಿಯಾಪು ಕೃಷ್ಣಭಟ್ಟರು, ದರ್ಶನ ಧ್ವನಿ ಕವನ ಸಂಕಲನಕ್ಕೆ ಬರೆದವರು ಪ್ರೊ| ಎಸ್.ವಿ. ಪರಮೇಶ್ವರ ಭಟ್ಟರು, ಪ್ರಜಾಪ್ರಭುತೇಶ್ವರ ವಚನ ಶತಕ ವಿಡಂಬನ ವಚನಕೃತಿಗೆ ಮುನ್ನುಡಿಕಾರರು ಪ್ರೊ| ಕು.ಶಿ. ಹರಿದಾಸ ಭಟ್ಟರು, ಹೆಸರಿಲ್ಲದವನ ಹೆಸರು ವಿಷ್ಣು ಸಹಸ್ರನಾಮದ 108 ನಾಮಗಳ ಕವನರೂಪ ಮತ್ತು ಧೂರ್ತ ರಾಜಕೀಯ ನಾಯಕಾಷ್ಟೋತ್ತರ ಶತನಾಮಾವಳಿ ವಿಡಂಬನ ನಾಮಾವಳಿ ಕೃತಿಗಳಿಗೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು, ಒರತೆ ಚಿಂತನಬರಹಗಳ ಸಂಕಲನದ ಮುನ್ನುಡಿಕಾರರು ಪ್ರೊ| ಅಮೃತ ಸೋಮೇಶ್ವರರು, ಗುರು ಗೀತಾಮೃತ ಭಕ್ತಿಗೀತಗಳ ಸಂಕಲನಕ್ಕೆ ಮುನ್ನುಡಿ ಬರೆದವರು ಶತಾವಧಾನಿ ಡಾ| ಆರ್. ಗಣೇಶರು, ಶ್ರೀ ದುರ್ಗಾಭಜನೆಗೆ ಮುನ್ನುಡಿ ಬರೆದವರು ಡಾ| ಕಬ್ಬಿನಾಲೆ ವಸಂತ ಭಾರದ್ವಾಜರು, ಹೀಗೆ ಕನ್ನಡದ ಎಲ್ಲ ತಲೆಮಾರಿನ ಶ್ರೇಷ್ಠ ವಿದ್ವಾಂಸರ ಸಂಪರ್ಕ ಅಂಬಾತನಯರಿಗಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top