ರಾಜ್ಯದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟ್ ಕೊಡಿಸಲು ಪ್ರಯತ್ನ
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೀಟ್ ಕೋಚಿಂಗ್ ಪಡೆಯಲು ಟ್ಯೂಷನ್ ಸೆಂಟರ್ಗೆ ಹೋಗಿ ಲಕ್ಷ ಲಕ್ಷ ಹಣ ಖರ್ಚು ಮಾಡಬೇಕಿಲ್ಲ. ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸು ಪೂರ್ತಿ ಮಾಡಲು ಸರ್ಕಾರವೇ ನೀಟ್ ಕೋಚಿಂಗ್ ನೀಡಲಿದೆ. ಪಿಯುಸಿಯ 25 ಸಾವಿರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್ ತರಬೇತಿ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ವಿದ್ಯಾರ್ಥಿಗಳಿಗೆ ಉಚಿತ CET, NEET, JEE, ತರಬೇತಿ ಕಾರ್ಯಕ್ರಮಕ್ಕೆ ಬುಧವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ.
ನೀಟ್ ಮೂಲಕ ವೈದ್ಯಕೀಯ ಸೀಟ್‌ಗಳು ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಹೆಚ್ಚು ಹಂಚಿಕೆಯಾಗುತ್ತಿದ್ದು, ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಇದೆ. ಈ ಹಿನ್ನೆಲೆಯಲ್ಲಿ ಸರಕಾರ ಬಡ ವಿದ್ಯಾರ್ಥಿಗಳಿಗೆ ನೀಟ್ ಕೋಚಿಂಗ್ ನೀಡಿ ಅವರನ್ನು ಪರೀಕ್ಷೆಗೆ ಸಜ್ಜುಗೊಳಿಸುವ ಯೋಜನೆ ರೂಪಿಸಿದೆ.
ಈ ವರ್ಷದಿಂದ ಶಾಲಾ ಶಿಕ್ಷಣ ಇಲಾಖೆ ವೈದ್ಯಕೀಯ ಶಿಕ್ಷಣ ಪಡೆಯುವ ಕನಸು ಕಂಡಿರುವ ಪಿಯುಸಿ ಪ್ರಥಮ ವರ್ಷದ 12500 ಹಾಗೂ ದ್ವಿತೀಯ ವರ್ಷದ 12500 ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ನೀಟ್ ಕೋಚಿಂಗ್ ನೀಡಲಿದೆ. ನೀಟ್ ತಜ್ಞರ ಮೂಲಕ ರಾಜ್ಯದ 25 ಸಾವಿರ ಪಿಯು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವೈದ್ಯಕೀಯ ಸೀಟ್‌ಗೆ ಸಿದ್ಧಪಡಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.
25 ಸಾವಿರ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು. ಬಳಿಕ ಅವರಿಗೆ ತಜ್ಞರ ಮೂಲಕ ಕೋಚಿಂಗ್ ನೀಡಲಾಗುವುದು.