ಮೂರು ವರ್ಷಗಳಿಂದ ಕೇರಳದ ಜೈಲಿನಲ್ಲಿದ್ದಾಳೆ ವಿಕ್ರಂ ಗೌಡ ಪ್ರೀತಿಸಿ ಮದುವೆಯಾದ ನಕ್ಸಲ್ ಯುವತಿ
ಕಾರ್ಕಳ : ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವ ನಕ್ಸಲ್ ನಾಯಕ ವಿಕ್ರಂ ಗೌಡನ ಹೆಂಡತಿಯೂ ನಕ್ಸಲ್ ಆಗಿದ್ದು, ಪ್ರಸ್ತುತ ಜೈಲಿನಲ್ಲಿದ್ದಾಳೆ. ನಕ್ಸಲ್ ಸಂಘಟನೆಯಲ್ಲೇ ಇದ್ದ ಸಾವಿತ್ರಿ (38) ಎಂಬ ಯುವತಿಯನ್ನು ಪ್ರೀತಿಸಿ ವಿಕ್ರಂ ಗೌಡ ಮದುವೆಯಾಗಿದ್ದ. ಇಬ್ಬರೂ ಅನೇಕ ವರ್ಷ ಮಾವೋವಾದಿ ಚಟುವಟಿಕೆಗಳಲ್ಲಿ ಜೊತೆಯಾಗಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈಕೆಯೂ ವಿಕ್ರಂ ಗೌಡನ ಊರಿನವಳೇ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತವಾದ ಮಾಹಿತಿಗಳು ಇಲ್ಲ.
ಸಾವಿತ್ರಿ ಮತ್ತು ಕೆಲವು ನಕ್ಸಲರನ್ನು 2021ರಲ್ಲಿ ಕೇರಳ ಪೊಲೀಸರು ವಯನಾಡಿನ ಸುಲ್ತಾನ್ ಬತ್ತೇರಿ ಎಂಬಲ್ಲಿ ಬಂಧಿಸಿದ್ದಾರೆ. ಪ್ರಸ್ತುತ ಅವರು ಕೇರಳದ ತೃಶ್ಶೂರು ಜಿಲ್ಲೆಯ ವಿಯ್ಯೂರು ಜೈಲಿನಲ್ಲಿದ್ದಾರೆ. ವಿಕ್ರಂ ಗೌಡ ಕೂಡ ಹಲವು ವರ್ಷ ಕೇರಳ-ಕರ್ನಾಟಕ ಗಡಿಭಾಗದಲ್ಲೇ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ. ಪಶ್ಚಿಮ ಘಟ್ಟದ ಭಾಗವೇ ಆಗಿರುವ ವಯನಾಡಿನ ದಟ್ಟಾರಣ್ಯ ಅವರ ಚಟುವಟಿಕೆಯ ಕೇಂದ್ರವಾಗಿತ್ತು. ಇಲ್ಲಿಂದ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಮೂರೂ ರಾಜ್ಯಗಳಿಗೆ ಪಲಾಯನ ಮಾಡಲು ದಾರಿಯಿದೆ. ಹೀಗಾಗಿ ಇಲ್ಲಿಂದ ಅವರು ಕಾರ್ಯಾಚರಣೆ ಮಾಡುತ್ತಿದ್ದರು. ಕೇರಳದ ಪೊಲೀಸರು ಕಾರ್ಯಾಚರಣೆ ನಡೆಸುವಾಗ ಕರ್ನಾಟಕ ಅಥವಾ ತಮಿಳುನಾಡಿಗೆ ನುಸುಳಿಕೊಂಡು ಹೋಗುತ್ತಿದ್ದರು. ಆದರೆ ಕೇರಳದ ನಕ್ಸಲ್ ನಿಗ್ರಹ ಪಡೆ ʼಥಂಡರ್‌ಬೋಲ್ಟ್ʼ ಪೊಲೀಸರ ಕಾರ್ಯಾಚರಣೆ ತೀವ್ರಗೊಂಡು ಪತ್ನಿ ಸಾವಿತ್ರಿ ಸೆರೆಯಾದ ಬಳಿಕ ವಿಕ್ರಂ ಗೌಡ ಕರ್ನಾಟಕದತ್ತ ಬಂದಿದ್ದ ಎಂದು ಮೂಲಗಳು ತಿಳಿಸಿವೆ.
ನಕ್ಸಲರೊಳಗೆ ಮದುವೆ ಸಾಮಾನ್ಯ
ನಕ್ಸಲ್ ಸಂಘಟನೆಯಲ್ಲಿ ಸಾಕಷ್ಟು ಮಹಿಳೆಯರೂ ಇರುತ್ತಾರೆ. ನಕ್ಸಲರು ತಮ್ಮ ಜೊತೆಗಿರುವ ಮಹಿಳೆಯರನ್ನೇ ಮದುವೆಯಾಗುವುದು ಇಲ್ಲಿ ಸಾಮಾನ್ಯ ವಿಷಯ ಮತ್ತು ಇದು ಅವರಿಗೆ ಅನಿವಾರ್ಯವೂ ಆಗಿರುತ್ತದೆ. ಇದೇ ರೀತಿ ವಿಕ್ರಂ ಗೌಡನ ಮದುವೆಯಾಗಿತ್ತು ಎನ್ನಲಾಗಿದೆ. ವಯನಾಡಿನ ಸುಲ್ತಾನ್ ಬತ್ತೇರಿಯಲ್ಲಿ ಸಾವಿತ್ರಿ ಜೊತೆ ಬಿ.ಜಿ.ಕೃಷ್ಣಮೂರ್ತಿ ಎಂಬ ನಕ್ಸಲ್ ಮುಖಂಡನೂ ಸೆರೆಯಾಗಿದ್ದು, ಈತ ಕೂಡ ಜೈಲಿನಲ್ಲಿದ್ದಾನೆ. ಕೃಷ್ಣಮೂರ್ತಿಯ ಪತ್ನಿ ಹೊಸಗದ್ದೆ ಪ್ರಭಾ ಕೂಡ ನಕ್ಸಲ್ ನಾಯಕಿ.
ನಕ್ಸಲ್ ಪಡೆಗೆ ಸದ್ಯ ಮುಖಂಡನಿಲ್ಲ
ನಕ್ಸಲ್ ಪಡೆಯ ಅತ್ಯುನ್ನತ ನಾಯಕನಾಗಿದ್ದ ಸಾಕೇತ್ ರಾಜನ್ ಅಲಿಯಾಸ್ ಪ್ರೇಮ್ 2005ರಲ್ಲಿ ಚಿಕ್ಕಮಗಳೂರಿನ ಮೆಣಸಿನಹಾಡ್ಯದಲ್ಲಿ ಎನ್‌ಕೌಂಟರ್‌ಗೆ ಬಲಿಯಾದ ಬಳಿಕ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆಯ ನೇತೃತ್ವ ಚಿಕ್ಕಮಗಳೂರಿನವನೇ ಆದ ಬಿ.ಜಿ.ಕೃಷ್ಣಮೂರ್ತಿ ಹೆಗಲಿಗೆ ಬಿದ್ದಿತ್ತು. ಅವನಿಗೆ ಜೊತೆಗಾರನಾಗಿ ವಿಕ್ರಂ ಗೌಡ ಇದ್ದ. ಕೃಷ್ಣಮೂರ್ತಿ ಸೆರೆಯಾದ ಬಳಿಕ ವಿಕ್ರಂ ಗೌಡನೇ ನಕ್ಸಲ್ ಪಡೆಗೆ ಮುಖಂಡನಾಗಿದ್ದ. ಸೋಮವಾರ ರಾತ್ರಿ ಅವನೂ ಹತ್ಯೆಯಾಗುವುದರೊಂದಿಗೆ ಕರ್ನಾಟಕದಲ್ಲಿ ನಕ್ಸಲರಿಗೆ ಮುಖಂಡನಿಲ್ಲದಂತಾಗಿದೆ.
ಮುಂಡಗಾರು ಲತಾ ಹೆಗಲಿಗೆ ಹೊಣೆ?
2018ರಿಂದಲೇ ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಗೊಳ್ಳಲಾರಂಭಿಸಿತ್ತು. ವಿಕ್ರಂ ಗೌಡ ಅದನ್ನು ಪುನಶ್ಚೇತನಗೊಳಿಸಲು ಸಾಕಷ್ಟು ಶ್ರಮಿಸಿದ್ದ. ಆದರೆ ಈಗ ಅವನು ಹತ್ಯೆಯಾಗುವುದರೊಂದಿಗೆ ಕೆಲವು ಮಹಿಳೆಯರು ಮಾತ್ರ ನಕ್ಸಲ್ ಸಂಘಟನೆಯಲ್ಲಿ ಉಳಿದಿದ್ದಾರೆ. ಈ ಪೈಕಿ ಮುಂಡಗಾರು ಲತಾ ಎಂಬಾಕೆಯ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಆಕೆ ವಿಕ್ರಂ ಗೌಡನ ಜೊತೆಗೆ ಇರುತ್ತಿದ್ದವಳು. ಕೆಲದಿನಗಳ ಹಿಂದೆ ಕೊಪ್ಪಕ್ಕೂ ಬಂದಿದ್ದಳು ಎಂಬ ಮಾಹಿತಿಯಿದೆ. ಸೋಮವಾರ ರಾತ್ರಿ ಎನ್‌ಕೌಂಟರ್ ನಡೆದ ದಿನ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷ ವಿಕ್ರಂ ಗೌಡನ ಜೊತೆಗೆ ಇದ್ದರು. ಆದರೆ ಇವರಲ್ಲಿ ಮುಂಡಗಾರು ಲತಾ ಇದ್ದಳೇ ಎನ್ನುವುದು ಮಾತ್ರ ತಿಳಿದುಬಂದಿಲ್ಲ. ಸದ್ಯಕ್ಕೆ ನಕ್ಸಲರು ಆಕೆಯನ್ನೇ ನಾಯಕಿಯನ್ನಾಗಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.