ಮೂರುದಿನಗಳಿಂದ ಹೊಂಚು ಹಾಕಿ ಕುಳಿತಿದ್ದ ಎನ್‌ಎನ್‌ಎಫ್ ಪಡೆ
ಕಾರ್ಕಳ : ಹೆಬ್ರಿಯ ಕಬ್ಬಿನಾಲೆ ಸಮೀಪ ಪೀತಬೈಲು ಎಂಬಲ್ಲಿ ಸೋಮವಾರ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ (44) ಹತನಾಗಿದ್ದಾನೆ. ಈ ಕಾರ್ಯಾಚರಣೆಯ ಒಂದೊಂದೇ ಮಾಹಿತಿ ಈಗ ಬಹಿರಂಗವಾಗುತ್ತಿದೆ. ನಕ್ಸಲರು ಪೀತಬೈಲಿನಲ್ಲಿರುವ ಮನೆಗಳಿಗೆ ಪಡಿತರ ಮತ್ತು ಹಣ ಪಡೆಯಲು ಬಂದು ಪೊಲೀಸರು ರಚಿಸಿದ್ದ ಖೆಡ್ಡಾಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಈ ಭಾಗದಲ್ಲಿ ನಕ್ಸಲರ ಓಡಾಟ ಮರಳಿ ಶುರುವಾಗಿರುವ ಕುರಿತು ನಕ್ಸಲ್ ನಿಗ್ರಹ ಪಡೆಗೆ ಖಚಿತ ಸುಳಿವು ದೊರಕಿತ್ತು. ಹೀಗಾಗಿ ಕೂಂಬಿಂಗ್ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು ಮಾತ್ರವಲ್ಲದೆ ಸ್ಥಳೀಯರಿಂದ ಮಾಹಿತಿ ಸಂಗ್ರಹವೂ ನಡೆದಿತ್ತು. ಸೋಮವಾರ ಪೀತಬೈಲಿನಲ್ಲಿರುವ ಮನೆಯೊಂದಕ್ಕೆ ನಕ್ಸಲರು ಪಡಿತರ ಪಡೆಯಲು ಬರುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ ಬಳಿಕ ಎನ್‌ಎಫ್‌ನವರು ಇಲ್ಲಿರುವ ಮೂರು ಮನೆಯವರನ್ನು ಸ್ಥಳಾಂತರಿಸಿ ಹೊಂಚು ಹಾಕಿ ಕುಳಿತಿದ್ದರು.
ಕತ್ತಲಾವರಿಸುತ್ತಿದ್ದಂತೆ ಸಂಜೆ ಸುಮಾರು 6.30ರ ವೇಳೆಗೆ ನಾಲ್ಕು ಮಂದಿ ನಕ್ಸಲರು ಮನೆಯ ಬಳಿ ಕಣಿಸಿಕೊಂಡಿದ್ದಾರೆ. ಈ ಪೈಕಿ ಮೂವರು ಕಾವಲುಗಾರರಾಗಿ ದೂರ ನಿಂತು ಒಬ್ಬ ಪಡಿತರ ಪಡೆಯಲು ಮನೆ ಸಮೀಪ ಬಂದಿದ್ದ. ನಕ್ಸಲ್ ತಂಡದಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಇದ್ದರು. ಎನ್‌ಎನ್‌ಎಫ್‌ನವರು ನಕ್ಸಲರಿಗೆ ಶರಣಾಗಲು ಸೂಚಿಸಿದ್ದಾರೆ. ನಕ್ಸಲರು ಶರಣಾಗಲು ನಿರಾಕರಿಸಿ ಗುಂಡು ಹಾರಿಸಿದಾಗ ಫೈರಿಂಗ್ ಶುರುವಾಗಿದೆ. ದೂರು ನಿಂತಿದ್ದ ಮೂವರು ಗುಂಡು ಹಾರಿಸುತ್ತಾ ಕಾಡಿನೊಳಗೆ ಓಡಿಹೋಗಿದ್ದಾರೆ. ಮನೆಯ ಸಮೀಪ ಇದ್ದ ನಕ್ಸಲ್‌ಗೆ ಗುಂಡು ತಾಗಿದೆ. ನಂತರ ಪೊಲೀಸರು ಹತ್ತಿರ ಹೋಗಿ ನೋಡಿದಾಗ ಆತ ಸುಮಾರು 20 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ನಕ್ಸಲ್ ಮುಖಂಡ ವಿಕ್ರಂ ಗೌಡ ಎಂದು ಗೊತ್ತಾಗಿದೆ. ಪೀತಬೈಲ್ನಲ್ಲಿ ಮೂರು ಕುಟುಂಬಗಳು ವಾಸವಾಗಿವೆ. ಈ ಪೈಕಿ ಸುಧಕರ್ ಗೌಡ ಎಂಬವರ ಮನೆಗೆ ವಿಕ್ರಂ ಗೌಡ ಹಾಗೂ ತಂಡ ಬಂದಿತ್ತು.
ಮೂರು ದಿನಗಳ ಹಿಂದೆಯೇ ಮನೆ ಖಾಲಿ ಮಾಡಿಸಿದ್ದ ಎಎನ್ಎಫ್
ಸುಧಕರ್ ಗೌಡ ಮನೆಗೆ ವಿಕ್ರಂ ಗೌಡ ಬರಬಹುದು ಎಂಬ ಸುಳಿವಿದ್ದ ಎಎನ್ಎಫ್ ಸಿಬ್ಬಂದಿ ಮೂರು ದಿನಗಳ ಹಿಂದೆಯೇ ಸುಧಾಕರ್ ಗೌಡರ ಕುಟುಂಬವನ್ನು ಅಲ್ಲಿಂದ ಖಾಲಿ ಮಾಡಿಸಿದ್ದರು. ಬಳಿಕ ಎಎನ್ಎಫ್ ಸಿಬ್ಬಂದಿಯೇ ಮನೆಯಲ್ಲಿ ತಂಗಿದ್ದರು. ನ.11ರಂದು ನಕ್ಸಲರು ಬಂದು ರೇಷನ್ ತೆಗೆದಿರಿಸುವಂತೆ ಹೇಳಿದ್ದರು. ರೇಷನ್ ಪಡೆಯಲು ಸೋಮವಾರ ಬರುವುದಾಗಿ ತಿಳಿಸಿತ್ತು. ಆದರೆ, ಮನೆಯೊಳಗೆ ಎಎನ್ಎಫ್ ಪಡೆ ಇರುವುದರ ಸಣ್ಣ ಸುಳಿವು ಕೂಡ ಇಲ್ಲದ ವಿಕ್ರಂ ಗೌಡ ಮನೆಯೊಳ ಹೊಕ್ಕಿದ್ದಾನೆ. ತಕ್ಷಣವೇ ಎಎನ್ಎಫ್ ಸಿಬ್ಬಂದಿ ಎದುರಾಗಿದ್ದಾರೆ. ವಿಕ್ರಂ ಗೌಡ ತಪ್ಪಿಸಿಕೊಂಡು ಓಡಿಹೋಗಲು ಅಂಗಳಕ್ಕೆ ಓಡಿ ಬಂದಿದ್ದ. ಆದರೆ ಅಂಗಳದಲ್ಲೇ ವಿಕ್ರಂ ಗೌಡನನ್ನು ಎಎನ್ಎಫ್ ಸಿಬ್ಬಂದಿ ಸುತ್ತುವರಿದಿದ್ದರು. ಶರಣಾಗುವಂತೆ ಸೂಚನೆ ನೀಡಿದಾಗ ‘ಪ್ರಾಣ ಕೊಟ್ಟರೂ ಶರಣಾಗಲ್ಲ’ ಎಂದಿದ್ದಲ್ಲದೆ, ತನ್ನ ನಾಡಬಂದೂಕಿನಿಂದ ದಾಳಿ ನಡೆಸಲು ಮುಂದಾಗಿದ್ದಾನೆ. ಈ ವೇಳೆ, ಮನೆಯ ಸುತ್ತಲೂ ಕವರ್ ಅಪ್ ಆಗಿದ್ದ ಎಎನ್ಎಫ್ ಸಿಬ್ಬಂದಿ ಪ್ರತಿ ದಾಳಿ ನಡೆಸಿದ್ದಾರೆ. ಮೂರೂ ಕಡೆಯಿಂದ ವಿಕ್ರಂ ಗೌಡನಿಗೆ ಗುಂಡು ಹೊಡೆದಿದ್ದಾರೆ. ಹೀಗಾಗಿ ಮನೆಯ ಅಂಗಳದಲ್ಲೇ ಆತ ಅಸುನೀಗಿದ್ದಾನೆ.
ಎಎನ್ಎಫ್ ಸಿಬ್ಬಂದಿಯ ಎಕೆ47ನಿಂದ ಹೊರಬಿದ್ದ ಆ ಮೂರು ಗುಂಡುಗಳು ಆತನ ಬಲಿಪಡೆದವು. ಎರಡು ಗುಂಡುಗಳು ಪಕ್ಕೆಲುಬು, ಒಂದು ಗುಂಡು ತೊಡೆಗೆ ತಗುಲಿತ್ತು ಎಂದು ತಿಳಿದುಬಂದಿದೆ.
ಹುಟ್ಟೂರಲ್ಲೇ ಪ್ರಾಣಬಿಟ್ಟ
ನಕ್ಸಲ್ ಮುಖಂಡ ವಿಕ್ರಂ ಗೌಡ ಎನ್ಕೌಂಟರ್ ನಡೆದ ಪಕ್ಕದ ಗ್ರಾಮ ಪೀತಬೈಲ್ನ ಪಕ್ಕದ ಗ್ರಾಮ ಕೂಡ್ಲುವಿನ ನಾಡ್ಪಾಲಿನಲ್ಲಿ ವಾಸವಾಗಿದ್ದ. 20 ವರ್ಷದ ಹಿಂದೆ ಕೊಡ್ಲುವಿನ ಮನೆಯಲ್ಲಿ ಮನೆಯವರ ಜೊತೆ ವಾಸವಾಗಿದ್ದ. ಆತನ ಸಹೋದರಿ ಹಾಗೂ ಸಹೋದರ ಈಗಲೂ ಅಲ್ಲಿ ಇದ್ದಾರೆ. ಆದರೆ ವಿಕ್ರಂ ಗೌಡ ಮಾತ್ರ 20 ವರ್ಷಗಳಿಂದ ಮನೆ ಕಡೆ ಮುಖ ಮಾಡಿರಲಿಲ್ಲ.
ಇಂದು ಪೋಸ್ಟ್‌ಮಾರ್ಟಂ
ವಿಕ್ರಂ ಗೌಡನ ಮೃತದೇಹ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿದೆ. ನಿನ್ನೆ ಪೋಸ್ಟ್‌ಮಾರ್ಟಂ ಮಾಡಲು ಸಾಧ್ಯವಾಗಿರಲಿಲ್ಲ. ಇಂದು ಪೋಸ್ಟ್‌ಮಾರ್ಟಂ ಮತ್ತು ನ್ಯಾಯಾಧೀಶರ ಸಮ್ಮುಖದಲ್ಲಿ ಇನ್‌ಕ್ವೆಸ್ಟ್ ನಡೆಯಲಿದೆ. ಬಳಿಕ ಶವವನ್ನು ಸಂಬಂಧಿಕರಿಗೆ ಬಿಟ್ಟು ಕೊಡಲಿದ್ದಾರೆ. ಅವನ ತಂದೆ-ತಾಯಿ ಬದುಕಿಲ್ಲ. ವಿಕ್ರಂ ಗೌಡ ಕುಟುಂಬವನ್ನು ಪೊಲೀಸರು ಸಂಪರ್ಕಿಸಿದ್ದಾರೆ. ವಿಕ್ರಂ ಗೌಡನ ಸಹೋದರ ಶವ ಪಡೆಯಲು ಬರುವ ಸಾಧ್ಯತೆಯಿದೆ ಎನ್ನಲಾಗಿದೆ. 21 ವರ್ಷಗಳಿಂದ ಮನೆಯವರೊಂದಿಗೆ ಸಂಪರ್ಕದಲ್ಲಿ ವಿಕ್ರಂ ಗೌಡ ಇರಲಿಲ್ಲ. ಆರಂಭದಲ್ಲಿ ಶವ ಪಡೆಯಲು ಕುಟುಂಬಸ್ಥರು ಹಿಂದೇಟು ಹಾಕಿದರು. ಪೊಲೀಸ್ ಇಲಾಖೆ ಮನವೊಲಿಸಿದ ಬಳಿಕ ಶವ ಪಡೆಯಲು ನಿರ್ಧರಿಸಿದ್ದಾರೆ.