ಹೋರಾಟಗಾರರ ವಿರುದ್ಧ ಛೇಲಾಗಳನ್ನು ಛೂ ಬಿಡುತ್ತಿರುವ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ದೂರುಗಳನ್ನು ದಾಖಲಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆದರಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಸ್ನೇಹಮಯಿ ಕೃಷ್ಣ ಅವರನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಜಯೇಂದ್ರ ತೀವ್ರವಾಗಿ ಕಿಡಿಕಾರಿದ್ದಾರೆ.
ತಮ್ಮ ಹಾಗೂ ಕುಟುಂಬದ ಭ್ರಷ್ಟಾಚಾರ ಬಯಲು ಮಾಡಿ ನ್ಯಾಯಾಲಯದಲ್ಲಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತರೊಬ್ಬರನ್ನು ಹಣಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಿಂಬಾಲಕರನ್ನು ಬಿಟ್ಟು ಸುಳ್ಳು ದೂರುಗಳನ್ನು ಕೊಡಿಸಿ ಬೆದರಿಕೆಯೊಡ್ಡುವ ತಂತ್ರ ಅನುಸರಿಸುತ್ತಿದ್ದಾರೆ. ಪೊಲೀಸ್ ಬಲ ಪ್ರಯೋಗಿಸಿ ಇಂತಹ ಆಧಾರ ರಹಿತ ದೂರುಗಳನ್ನು ದಾಖಲಿಸಿಕೊಂಡು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕ ದಾರಿಯಲ್ಲಿ ಹೋರಾಡುತ್ತಿರುವ ಕಾರ್ಯಕರ್ತರೊಬ್ಬರನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ. ಇದು ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ನವರ ಹತಾಶೆಯ ಎಲ್ಲೆ ಮೀರಿದ ದೌರ್ಜನ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದ್ದಾರೆ.
ತೋಳ್ಬಲ ಹಾಗೂ ಅಧಿಕಾರ ಬಲವನ್ನು ಪ್ರಯೋಗಿಸಿ ಒಬ್ಬ ಜನಪರ ಕಾಳಜಿಯ ಸಾಮಾನ್ಯ ಪ್ರಜೆಯ ಹೋರಾಟದ ಹಕ್ಕನ್ನು ದಮನ ಮಾಡುವ ನೀಚ ಬೆಳವಣಿಗೆ ಇದಾಗಿದೆ. ಬಿಜೆಪಿ ಇದನ್ನು ಅತ್ಯುಗ್ರವಾಗಿ ಖಂಡಿಸುತ್ತದೆ. ಸುಳ್ಳು ದೂರು, ಬೆದರಿಕೆಗಳು ಮುಂದುವರಿದಲ್ಲಿ ಸಾಮಾಜಿಕ ಕಾರ್ಯಕರ್ತರ ರಕ್ಷಣೆಗೆ ಬಿಜೆಪಿ ನಿಲ್ಲಲಿದೆ ಎಂದು ಹೇಳಿದ್ದಾರೆ.