ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಚರ್ಚಾ ಕೂಟದ ಆಶ್ರಯದಲ್ಲಿ ‘ಅಮೇರಿಕಾ ಚುನಾವಣಾ ಫಲಿತಾಂಶದ ವಿಶ್ಲೇಷಣಾ’ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ರಾಜಕೀಯ ವಿಶ್ಲೇಷಕ, ವಿವೇಕಾನಂದ ಪಾಲಿಟೆಕ್ಣಿಕ್ ನ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ಅವರು, ಅಮೇರಿಕಾವು ವಿಭಿನ್ನ ಮನಸ್ಥಿತಿಯ ದೇಶವಾಗಿದೆ. ಅಲ್ಲಿಯೂ ಭಾರತದಲ್ಲಿ ಇರುವಂತಹ ಹಲವಾರು ಸಾಮಾಜಿಕ ಸಮಸ್ಯೆಗಳಿವೆ. ಅಮೇರಿಕಾದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳನ್ನು ವಿವರಿಸಿ, ಅಲ್ಲಿನ ಸಮಸ್ಯೆಗಳನ್ನು ಭಾರತಿಯ ಸಮಾಜದ ಜೊತೆಗೆ ಹೋಲಿಕೆ ಮಾಡಿದರಲ್ಲದೆ, ಅಮೇರಿಕಾದ ಚುನಾವಣೆಯ ಫಲಿತಾಂಶದ ಕುರಿತು ವಿಶ್ಲೇಷಣೆ ಮಾಡಿದರು. ಜಾಗತಿಕವಾಗಿ ಡೋನಾಲ್ಡ್ ಟ್ರಂಪ್ ಗೆಲವು ಹಲವು ರೀತಿಯ ಹೊಸ ಅವಕಾಶಗಳನ್ನು ಹುಟ್ಟುಹಾಕಿದೆ. ಟ್ರಂಪ್ ಗೆಲುವಿನ ಹಿಂದೆ ಅವರ ‘ಅಮೇರಿಕಾ ಮೊದಲು’ ಎಂಬ ನೀತಿಯು ವಿಶ್ವದ ಹಲವು ಅಭಿವೃದ್ಧಿಶೀಲ ದೇಶಗಳಲ್ಲಿ ಸಣ್ಣ ತಲ್ಲಣವನ್ನು ಸೃಷ್ಟಿಸಿದೆ. ಆದರೆ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವದ ದೇಶಕ್ಕೆ ಅಮೇರಿಕಾದ ಈ ಚುನಾವಣೆಯು ಯಾವುದೇ ದೊಡ್ಡ ಮಟ್ಟದ ಬದಲಾವಣೆ ತರಲ್ಲ ಎಂದರು.
ಇನ್ನೊರ್ವ ಸಂಪನ್ಮೂಲ ವ್ಯಕ್ತಿಯಾಗಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಶೃತ್ ಸುಧೀರ್ ಉರ್ವ ಮಾತನಾಡಿ, ಅಮೇರಿಕಾ ಖಂಡದ ಇತಿಹಾಸ, ಅಲ್ಲಿಯ ರಾಜಕೀಯ ಪಕ್ಷಗಳ ವಿಶಿಷ್ಟತೆ ಹಾಗೂ ಅಧ್ಯಕ್ಷೀಯ ಚುನಾವಣೆಯ ಕುರಿತು ಮಾಹಿತಿ ನೀಡಿದರು. 2024ರ ಚುನಾವಣೆಯ ಸಂಪೂರ್ಣ ಚಿತ್ರಣವನ್ನು ವಿಶ್ಲೇಷಣೆ ಮಾಡಿದ ಅವರು, ಡೋನಾಲ್ಡ್ ಟ್ರಂಪ್ ಗೆಲುವಿನ ಹಿಂದಿನ ಕಾರಣಗಳನ್ನು ವಿವರಿಸಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕ ವಿಜಯನಾರಾಯಣ ಕೆ. ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಒಂದು ವಿಷಯದ ಕುರಿತು ವಿಶ್ಲೇಷಣೆ ಮಾಡುವಾಗ ನೈಜತೆಯನ್ನು ಹಾಗೂ ವಸ್ತುಸ್ಥಿತಿಯನ್ನು ಕಾಪಾಡಿಕೊಳ್ಳಬೇಕು. ಯಾವುದೇ ಒಂದು ವಿಷಯದ ವಿಶ್ಲೇಷಣೆಯು ಒಬ್ಬ ವಿದ್ಯಾರ್ಥಿಗೆ ಆ ವಿಷಯವನ್ನು ಸರಿಯಾದ ದೃಷ್ಟಿಕೋನದಲ್ಲಿ ಅರ್ಥೈಸಲು ಸಾಧ್ಯವಾಗುತ್ತದೆ. ಅಮೇರಿಕಾ ಚುನಾವಣಾ ಫಲಿತಾಂಶದಂತಹ ವಿಶ್ಲೇಷಣೆಗಳು ಕಾನೂನು ವಿದ್ಯಾರ್ಥಿಗಳಲ್ಲಿ ಜಾಗತಿಕ ವಿದ್ಯಮಾನವನ್ನು ತಿಳಿಸುವಲ್ಲಿ, ಜ್ಞಾನವನ್ನು ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ‘ಜ್ಞಾನಬಿಂಬ’ ಹಾಗೂ ಎನ್.ಎಸ್.ಎಸ್. ಘಟಕದ ‘ಸೇವಾಬಿಂಬ’ ಭಿತ್ತಿಪತ್ರಿಕೆಯ ‘ಅಮೇರಿಕಾ ಚುನಾವಣೆ-2024’ ಎಂಬ ವಿಶೇಷ ಸಂಚಿಕೆಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ವಿಶೇಶ್ವರ ಭಟ್ ಬಂಗಾರಡ್ಕ ಅನಾವರಣಗೊಳಿಸಿದರು.
ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲೆ ಅಕ್ಷತಾ ಎ.ಪಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಅವನೀಶ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಹರೀಶ್ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕಿ ಆಶಿತಾ ವಂದಿಸಿದರು.