ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡಿದ್ದ ಆರೋಪದಲ್ಲಿ ಹುರುಳಿಲ್ಲ ಎಂದು ವರದಿ ಸಲ್ಲಿಸಿದ ಲೋಕಾಯುಕ್ತ
ಬೆಂಗಳೂರು: ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ 40 ಪರೆಂಟ್ ಕಮಿಷನ್ ಆರೋಪ ಸುಳ್ಳು ಎಂಬುದು ಲೋಕಾಯುಕ್ತ ತನಿಖೆಯಿಂದ ಸಾಬೀತಾಗಿ ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ತೀವ್ರ ಮುಜುಗರ ಅನುಭವಿಸುವಂತಾಗಿದೆ. ಅಂದಿನ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮಾಡಿದ್ದ 40 ಪರ್ಸೆಂಟ್ ಆರೋಪ ಸುಳ್ಳೆಂಬುದು ಲೋಕಾಯುಕ್ತ ತನಿಖೆಯಿಂದ ತಿಳಿದುಬಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 40 ಪರ್ಸೆಂಟ್ ಕಮಿಷನ್ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಅಂಬಿಕಾಪತಿ ಆರೋಪ ಮಾಡಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ಆರೋಪ ಮಾಡಲಾಗಿತ್ತು. 40 ಪರ್ಸೆಂಟ್ ಕಮಿಷನ್ ಆರೋಪವನ್ನು ರಾಜಕೀಯವಾಗಿ ಪ್ರಬಲ ಅಸ್ತ್ರ ಮಾಡಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿದ್ದರು. ಇದನ್ನೇ ಪ್ರಮುಖವಾಗಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಕಾಂಗ್ರೆಸ್ ಬಹುತೇಕ ಯಶಸ್ವಿಯಾಗಿತ್ತು. ಪೇ ಸಿಎಂ ಎಂದು ಪೋಸ್ಟರ್ ಅಂಟಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡಿತ್ತು.
ಅಚ್ಚರಿಯೆಂದರೆ ಈಗ ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿರುವಾಗಲೇ ಲೋಕಾಯುಕ್ತ ಪೊಲೀಸರು ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಿದ್ದಾರೆ. ಅಂಬಿಕಾಪತಿ ಅಂದು ಮಾಡಿದ್ದ ಆರೋಪಗಳು ಆಧಾರರಹಿತ ಎಂಬುದು ಲೋಕಾಯುಕ್ತ ತನಿಖಾ ವರದಿಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ಆರೋಪ ಮಾಡಿರುವ ಅಂಬಿಕಾಪತಿ ಬಿಬಿಎಂಪಿ ಪೂರ್ವ ವಿಭಾಗದಲ್ಲಿ ಕಳೆದ 6 ವರ್ಷಗಳಲ್ಲಿ ಆಟದ ಮೈದಾನಕ್ಕೆ ಸಂಬಂಧಿಸಿದ ಯಾವುದೇ ಗುತ್ತಿಗೆ ಪಡೆಯದೆ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತ ದಾಖಲೆಗಳನ್ನೂ ಪರಿಶೀಲಿಸಲಾಗಿದ್ದು, ಗುತ್ತಿಗೆದಾರ ಎನ್.ಎಂ ಕೃಷ್ಣಮೂರ್ತಿ ಕಾಮಗಾರಿ ಪೂರ್ಣಗೊಳಿಸಿರುವುದು ತಿಳಿದುಬಂದಿದೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ.
ಅಂಬಿಕಾಪತಿ ಸುದ್ದಿ ವಾಹಿನಿಯೊಂದಕ್ಕೆ ಕೊಟ್ಟಿರುವ ಸಂದರ್ಶನದಲ್ಲಿ ಆಟದ ಮೈದಾನದ ಕಾಮಗಾರಿಯ ಗುತ್ತಿಗೆಗಾಗಿ ಅಧಿಕಾರಿಗಳಿಗೆ ಮತ್ತು ಮಧ್ಯವರ್ತಿಗಳಿಗೆ ಲಂಚ ನೀಡಿದ್ದೇನೆ ಎಂದು ಹೇಳಿರುವುದರಿಂದ ತನಿಖೆ ನಡೆಸಿ ವರದಿಯನ್ನು ಸಲ್ಲಿಸಬೇಕೆಂದು ಕೋರಿ ಸಲ್ಲಿಕೆಯಾದ ಮನವಿ ಅನ್ವಯ ದೂರನ್ನು ದಾಖಲಿಸಿ ಪೊಲೀಸರು ತನಿಖೆ ಮಾಡಿರುತ್ತಾರೆ. ಅಂಬಿಕಾಪತಿಯವರು ಯಾವ ದಿನಾಂದಂದು ಸಂದರ್ಶನ ಕೊಟ್ಟಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಿರುವುದಿಲ್ಲ. ಆದರೆ 5 ವರ್ಷಗಳ ಹಿಂದಿನ ಅವಧಿಯಲ್ಲಿಯೂ ಅಂಬಿಕಾಪತಿಯವರು ಬಿಬಿಎಂಪಿಯ ಪೂರ್ವವಲಯದಲ್ಲಾಗಲಿ ಅಥವಾ ಇತರ ವಲಯಗಳಲ್ಲಿ ಯಾವುದೇ ಕಾಮಗಾರಿಯ ಗುತ್ತಿಗೆಯನ್ನು ಪಡೆದಿರುವುದಿಲ್ಲ. ಆದ್ದರಿಂದ ಅವರು ಮಾಡಿರುವ ಆರೋಪಗಳು ಸುಳ್ಳು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಪೋಲೀಸ್ ತನಿಖಾ ವರದಿಯನ್ನು ಒಪ್ಪಿಕೊಂಡು ಈ ದೂರಿನಲ್ಲಿ ತನಿಖೆ ಕೈಗೊಳ್ಳಬೇಕಾದ ಅಂಶ ಯಾವುದೂ ಇರುವುದಿಲ್ಲ. ಈ ದೂರನ್ನು ಮುಕ್ತಾಯಗೊಳಿಸಬಹುದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.