ಡಿ.ಕೆ. ಶಿವಕುಮಾರ್ ಹೇಳಿಕೆ ಹಿನ್ನೆಲೆಯಲ್ಲಿ ಗರಿಗೆದರಿದ ನಿರೀಕ್ಷೆ
ಬೆಂಗಳೂರು: ಸರಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಭಾಗ್ಯ ಪುರುಷರಿಗೂ ಸಿಗಲಿದೆಯೇ? ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಯೊಂದು ಈ ನಿಟ್ಟಿನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಶಕ್ತಿ ಯೋಜನೆಯಡಿ ವಯೋಮಿತಿಗೊಳಪಡಿಸಿ ಗಂಡಸರಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಬಳಿಕ ಗಂಡಸರಿಗೂ ಫ್ರೀ ಬಸ್ ಪ್ರಯಾಣ ಸೌಲಭ್ಯ ಸಿಗುವ ಸಾಧ್ಯತೆ ಇದೆ ಎಂಬ ಆಶಾಭಾವನೆ ಗರಿಗೆದರಿದೆ.
ವಿಧಾನಸೌಧದಲ್ಲಿ ನಿನ್ನೆ ಔಪಚಾರಿಕವಾಗಿ ಮಾತನಾಡುವಾಗ ಡಿಕೆಶಿ ಪುರುಷರಿಗೂ ಉಚಿತ ಪ್ರಯಾಣ ಭಾಗ್ಯ ನೀಡುವ ಸಾಧ್ಯತೆಯ ಬಗ್ಗೆ ಸುಳಿವುಕೊಟ್ಟಿದ್ದಾರೆ. ಶಕ್ತಿ ಯೋಜನೆ ಬಗ್ಗೆ ವಿದ್ಯಾರ್ಥಿಗಳಿಂದ ಕೇಳಿಬಂದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ ಶಕ್ತಿ ಯೋಜನೆಯಡಿ ನಿರ್ದಿಷ್ಟ ವಯೋಮಾನದವರೆಗಿನ ಗಂಡು ಮಕ್ಕಳಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಯೋಚಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಡಿಕೆಶಿ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಡಿಸಿಎಂ ಶಿವಕುಮಾರ್ ಮಕ್ಕಳ ಜೊತೆಗೆ ಮಾತನಾಡಿದ್ದಾರೆ. ಆ ಬಗ್ಗೆ ನನಗೆ ಏನು ಮಾಹಿತಿ ಇಲ್ಲ. ಅವರ ಜೊತೆಗೆ ಮಾತನಾಡಿ ಹೇಳುವೆ ಎಂದು ತಿಳಿಸಿದ್ದಾರೆ.