ಆರು ವರ್ಷಗಳಿಂದ ವಾಸವಾಗಿದ್ದ ಮನೆಯನ್ನು ದಿಢೀರ್ ತೆರವುಗೊಳಿಸಿದ ಕಾರಣ ವೃದ್ಧರು ಅತಂತ್ರ
ಮಂಗಳೂರು : ಅಧಿಕಾರಿಗಳು ದಿಢೀರ್ ಎಂದು ಮನೆಯನ್ನು ಧ್ವಂಸ ಮಾಡಿದ ಕಾರಣ ಅತಂತ್ರವಾಗೊರುವ ವೃದ್ಧ ದಂಪತಿ ಮನೆ ನಿರ್ಮಿಸಕೊಡಿ ಅಥವಾ ಸಾಯಲು ಅನುಮತಿ ಕೊಡಿ ಎಂದು ಯಾಚಿಸಿ ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ಕಡಬದಲ್ಲಿ ಸಂಭವಿಸಿದೆ.
ಕಡಬ ತಾಲೂಕಿನ ಕೌಕ್ರಾಡಿಯಲ್ಲಿ ವಾಸವಾಗಿರುವ ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿಯ ಮನೆಯನ್ನು ಇಂದು ಏಕಾಏಕಿ ಧ್ವಂಸಗೊಳಿಸಲಾಗಿದೆ. ಇದರಿಂದ ಕಂಗಾಲು ಆಗಿರುವ ದಂಪತಿ ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ದಂಪತಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಹಟ್ಟಿಯವರು. ಕೂಲಿ ಕೆಲಸಕ್ಕಾಗಿ ಕರಾವಳಿಗೆ ಆಗಮಿಸಿ ಕಡಬ ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದ ಆಗಮಿಸಿ ವಾಸಗಿದ್ದಾರೆ. ಕೌಕ್ರಾಡಿ ಗ್ರಾಮದ ಕಾವಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದ ಸರ್ವೇ ನಂಬರ್ 123/1ರಲ್ಲಿ ಕಳೆದ 6 ವರ್ಷಗಳಿಂದ ವಾಸಿಸುತ್ತಿದ್ದಾರೆ.
ದಂಪತಿಗೆ ಯಾವುದೆ ಪಿತ್ರಾರ್ಜಿತ ಆಸ್ತಿ ಇಲ್ಲ. ಹೀಗಾಗಿ ಸರ್ಕಾರಿ ಜಾಗ 123/1ರಲ್ಲಿ ಕಾಪಿನಬಾಗಿಲು ಎಂಬಲ್ಲಿ ಸಣ್ಣ ಮನೆಕಟ್ಟಿಕೊಂಡಿದ್ದರು. ದಂಪತಿ ನಿತ್ಯ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ವೃದ್ಧ ದಂಪತಿ ಸರ್ಕಾರಿ ಜಾಗದಲ್ಲಿ ಇದ್ದಾರೆ ಎಂಬ ಕಾರಣಕ್ಕಾಗಿ ಬೆಳ್ತಂಗಡಿ ತಾಲೂಕಿನ ಅಶೋಕ್ ಆಚಾರ್ಯ ಎಂಬವರು ಇವರನ್ನು ಒಕ್ಕಲೆಬ್ಬಿಸುವ ಸಲುವಾಗಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ. ಸರ್ಕಾರಿ ಜಾಗ ಖಾಲಿ ಮಾಡಲು ಹೈಕೋರ್ಟ್ ಸೂಚನೆ ನೀಡಿದ ಕಾರಣ ಕಳೆದ ಫೆಬ್ರವರಿಯಲ್ಲೇ ಮನೆ ತೆರವಿಗೆ ಅಧಿಕಾರಿಗಳು ಮುಂದಾಗಿದ್ದರು. ಆದರೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೆ ಕೆಡವದೆ ಪ್ರಕರಣ ತಣ್ಣಗಾಗಿತ್ತು.
ಇಂದು ದಿಢೀರ್ ಎಂದು ಆಗಮಿಸಿದ ಅಧಿಕಾರಿಗಳು ಮನೆಯ ವಸ್ತುಗಳನ್ನು ಹೊರಗೆ ಎಸೆದು ಮನೆಯನ್ನು ಕೆಡವಿ ಹಾಕಿದ್ದಾರೆ. ವೃದ್ಧ ದಂಪತಿ ಕಣ್ಣೀರು ಹಾಕಿದರೂ ಕರಗದ ಅಧಿಕಾರಿಗಳು ಮನೆ ತೆರವುಗೊಳಿಸಿದ್ದಾರೆ. ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಆರ್‌ಐ ಪೃಥ್ವಿರಾಜ್, ಉಪ್ಪಿನಂಗಡಿ ಪೊಲೀಸರ ನೇತೃತ್ವದಲ್ಲಿ ಮನೆ ತೆರವು ಮಾಡಲಾಗಿದೆ.
ಈಗ ಸೂರು ಕಳೆದುಕೊಂಡಿರುವ ವೃದ್ಧ ದಂಪತಿ ನಮಗೆ ಈ ಸರ್ಕಾರಿ ಜಾಗದಲ್ಲಿ ನಾವು ನಿರ್ಮಿಸಿರುವ ಸಣ್ಣ ಮನೆಯಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ. ಅಥವಾ ದಯಮಾಡಿ ವೃದ್ಧರಾದ ನಮಗೆ ದಯಾಮರಣ ಅಥವಾ ಇನ್ನಾವುದೇ ರೀತಿಯಲ್ಲಿ ಒಳ್ಳೆಯ ಮರಣಕ್ಕೆ ಅವಕಾಶವನ್ನು ನೀಡಿ ಎಂದು ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದಾರೆ.