ಮುಂಡಗಾರು ಲತಾ ನೇAತೃತ್ವದ ನಕ್ಸಲ್ ತಂಡ ಸಕ್ರಿಯ
ಕಾರ್ಕಳ : ಪಶ್ಚಿಮ ಘಟ್ಟದ ಕಾಡಿನಂಚಿನಲ್ಲಿ ಕೊಂಚ ಸಮಯ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಜೀವ ಪಡೆದುಕೊಂಡಿರುವುದು ಕಳೆದ ಒಂದು ವಾರದ ಬೆಳವಣಿಗೆಯಿಂದ ದೃಢಪಟ್ಟಿದೆ. ಹೋರಾಡಲು ಗಟ್ಟಿಯಾದ ವಿಷಯ ಇಲ್ಲದೆ ಮತ್ತು ನಿರಂತರವಾದ ಪ್ರತಿರೋಧದಿಂದಾಗಿ ಕಳೆದ ಕೆಲ ವರ್ಷಗಳಿಂದ ಪಶ್ಚಿಮ ಘಟ್ಟದ ಅಂಚಿನ ಪ್ರದೇಶಗಳಲ್ಲಿ ನಕ್ಸಲರು ಹೆಚ್ಚು ಚಟುವಟಿಕೆ ನಡೆಸುತ್ತಿರಲಿಲ್ಲ. ಆದರೆ ಯಾವಾಗ ಸರಕಾರ ಕುದುರೆಮುಖ ರಾಷ್ಟ್ರೀಯ ಅರಣ್ಯದ ಒತುವರಿ ತೆರವಿಗೆ ಆದೇಶಿಸಿತೋ ಆಗಲೇ ಎದ್ದು ಕುಳಿತ ನಕ್ಸಲರು ಕಾಡಿನಂಚಿನಲ್ಲಿರುವ ಜನರನ್ನು ಒಗ್ಗೂಡಿಸಲು ಯತ್ನಿಸುತ್ತಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ಬಳಿಕ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಕ್ಸಲ್ ಚಳವಳಿಗೆ ವಿಚಾರ, ಬೆಂಬಲ ಸಿಗದೆ ಪಕ್ಕದ ರಾಜ್ಯ ಕೇರಳಕ್ಕೆ ಶಿಫ್ಟ್ ಆಗಿತ್ತು. ಆದರೆ ಇದೀಗ, ಕರ್ನಾಟಕದ ಕರಾವಳಿ ಮಲೆನಾಡು ಭಾಗದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾದು ಕುಳಿತ್ತಿದ್ದ ನಕ್ಸಲರು ಮತ್ತ ಚಟುವಟಿಕೆ ಆರಂಭಿಸಿದ್ದಾರೆ.
ಈ ಮಳೆಗಾಲದಲ್ಲಿ ಚಾರ್ಮಾಡಿ ಘಾಟಿ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಿರಂತರವಾಗಿ ಭೂ ಕುಸಿತ ಸಂಭವಿಸಿ ಸಂಭಾವ್ಯ ಅಪಾಯದ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಪರಿಸರವಾದಿಗಳಿಂದ ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಮರು ಜಾರಿಯಾಗಬೇಕೆಂಬ ಕೂಗು ಕೇಳಿಬಂದಿದೆ. ಇದರ ಬೆನ್ನಲ್ಲೇ ಸರಕಾರ ವರದಿ ಜಾರಿಯ ಪ್ರಕ್ರಿಯೆ ಪ್ರಾರಂಭಿಸಿದ್ದು, ಇದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ನಿವಾಸಿಗಳ ನಿದ್ದೆಗೆಡಿಸಿದೆ. ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಅಲ್ಲಲ್ಲಿ ನಾಗರಿಕ ಹೋರಾಟಗಳು ಈಗಾಗಲೇ ಪ್ರಾರಂಭವಾಗಿವೆ. ಇದರ ಜೊತೆಗೆ ನಕ್ಸಲರು ಎದ್ದುಬಂದು ಪಶ್ಚಿಮ ಘಟ್ಟದ ಜನರನ್ನು ತಲುಪಲು ಯತ್ನಿಸುತ್ತಿದ್ದಾರೆ.
ಇದಕ್ಕೆ ಸಾಕ್ಷಿ ಕೆಲ ದಿನಗಳ ಹಿಂದೆ ಕಾರ್ಕಳದ ಈದು ಪರಿಸರದಲ್ಲಿ ನಕ್ಸಲರು ಓಡಾಡಿದ ಸುದ್ದಿ ಮತ್ತು ಕೊಪ್ಪದ ಮನೆಯೊಂದರಲ್ಲಿ ಬಂದೂಕುಗಳು ಪತ್ತೆಯಾಗಿರುವುದು. ಚಿಕ್ಕಮಗಳೂರು ಸೇರಿದಂತೆ ಶಿವಮೊಗ್ಗ ಭಾಗದಲ್ಲಿ ಆತಂಕ ಸೃಷ್ಟಿಸಿರುವ ಅರಣ್ಯ ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ ಜಾರಿ ಆತಂಕವನ್ನೇ ಅಸ್ತ್ರ ಮಾಡಿಕೊಂಡಿರುವ ನಕ್ಸಲ್ ತಂಡ ಚಟುವಟಿಕೆ ಪ್ರಾರಂಭಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೆ ತುಂಗಾ ತಂಡದ ಕುಖ್ಯಾತ ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿದಂತೆ 6 ಜನ ಶಸ್ತ್ರಧಾರಿಗಳ ತಂಡ ಭೇಟಿ ನೀಡಿರುವುದು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಮೂಡಿಗೆರೆ, ಕಳಸ ತಾಲೂಕಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಳೆದ 15 ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ಪೀಡಿತ ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಮುಂಡಗಾರು ಲತಾ ನೇತೃತ್ವದ ತಂಡ ಸಕ್ರಿಯವಾಗಿದ್ದು, ಕಾಡಂಚಿನ ಮನೆಗಳಿಗೆ ಭೇಟಿ ನೀಡಿದೆ ಎನ್ನಲಾಗುತ್ತಿದೆ. ಕಸ್ತೂರಿ ರಂಗನ್ ವರದಿ ಜಾರಿ ಸೇರಿದಂತೆ ಅರಣ್ಯ ಒತ್ತುವರಿ ತೆರವು ವಿರುದ್ಧ ಬೆಂಬಲ ಕೋರಿ ಸಭೆ ನಡೆಸಲಾಗಿದೆ ಎಂಬ ಮಾಹಿತಿ ಮೇರೆಗೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮ್ಟೆ, ನಕ್ಸಲ್ ನಿಗ್ರಹ ಪಡೆ ಎಸ್ಪಿ ಜಿತೇಂದ್ರ ನೇತೃತ್ವದಲ್ಲಿ ಕೊಪ್ಪ ತಾಲೂಕಿನ ಯಡಗುಂದ, ಕಡೆಗುಂಡಿ ಗ್ರಾಮದ ಮನೆಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸಲಾಗಿದೆ. ಕಡೆಗುಂಡಿ ಗ್ರಾಮದ ಸುಬ್ಬೇ ಗೌಡ ಎನ್ನುವವರ ಮನೆಯಲ್ಲಿ ಮೂರು ಬಂದೂಕುಗಳು ಪತ್ತೆಯಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬಂದೂಕು ಸಿಕ್ಕಿರುವ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಕುದುರೆಮುಖ, ಕೊಪ್ಪ ಶೃಂಗೇರಿ, ಕೆರೆಕಟ್ಟೆ ಭಾಗದಲ್ಲಿ ತೀವ್ರ ಕೂಂಬಿಂಗ್ ಕಾರ್ಯಚರಣೆ ನಡೆಯುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.