ಇರುಮಡಿ ಕಟ್ಟಿನಲ್ಲಿ ಈ ವಸ್ತುಗಳು ಇರಲೇಬಾರದು ಎಂದು ಸೂಚನೆ
ಶಬರಿಮಲೆ : ಮಂಡಲ ಮತ್ತು ಮಕರ ವಿಳಕ್ಕು ಯಾತ್ರೆಗೈಯ್ಯುವ ಅಯ್ಯಪ್ಪ ಭಕ್ತರ ಇರುಮುಡಿಯಲ್ಲಿ ಏನೇನು ಇರಬೇಕು ಮತ್ತು ಇರಬಾರದು ಎಂಬುದರ ಕುರಿತು ಕೇರಳದ ದೇವಸ್ವಂ ಬೋರ್ಡ್ ಮಾರ್ಗಸೂಚಿಯೊಂದನ್ನು ಬಿಡುಗಡೆಗೊಳಿಸಿದೆ. ಶಬರಿಮಲೆಯ ಮುಖ್ಯ ಅರ್ಚಕ ಕಂಡರಾರು ರಾಜೀವಾರು ನೀಡಿದ ಸೂಚನೆ ಪ್ರಕಾರ ಈ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ದೇವಸ್ವಂ ಬೋರ್ಡ್ ಹೇಳಿಕೊಂಡಿದೆ.
ಶಬರಿಮಲೆ ಯಾತ್ರೆಗೈಯ್ಯುವವರು ಇಡುಮುಡಿ ಹೊತ್ತುಕೊಂಡು ಸಾಗಬೇಕಾಗುತ್ತದೆ. ಇರುಮುಡಿಯನ್ನು ಮುಂದಿನ ಕಟ್ಟು ಮತ್ತು ಹಿಂದಿನ ಕಟ್ಟು ಎಂದು ಎರಡು ಭಾಗ ಮಾಡಿ ಕಟ್ಟುತ್ತಾರೆ. ಹಿಂದಿನ ಕಾಲದಲ್ಲಿ ಶಬರಿಮಲೆ ಯಾತ್ರೆಗೈಯ್ಯುವಾಗ ದಾರಿಮಧ್ಯೆ ಅನ್ನ ಬೇಯಿಸಿಕೊಳ್ಳಲು ಅಗತ್ಯವಿರುವ ಅಡುಗೆ ವಸ್ತುಗಳು ಈ ಇರುಮಡಿಯಲ್ಲಿ ಇರುತ್ತಿದ್ದವು. ಈಗ ದಾರಿಯುದ್ದಕ್ಕೂ ಹೋಟೆಲ್‌ಗಳು ಇರುವುದರಿಂದ ದಾರಿಮಧ್ಯೆ ಅನ್ನ ಬೇಯಿಸುವ ಅಗತ್ಯ ಬರುವುದಿಲ್ಲ. ಆದರೆ ಶಬರಿಮಲೆ ಅಯ್ಯಪ್ಪನ ಸನ್ನಿಧಾನದಲ್ಲಿ ನೈವೇದ್ಯ ಮತ್ತು ಪೂಜೆಗೆ ಬೇಕಾದ ವಸ್ತುಗಳನ್ನು ಇರುಮುಡಿಯಲ್ಲೇ ಒಯ್ಯಬೇಕು. ಆದರೆ ಕೆಲವು ಭಕ್ತರು ಬೇಕಾಬಿಟ್ಟಿಯಾಗಿ ಅಗತ್ಯ ಇಲ್ಲದ ವಸ್ತುಗಳನ್ನೂ ತರುತ್ತಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ರಚಿಸಲಾಗಿದೆ.
ಮಾರ್ಗಸೂಚಿಯ ಪ್ರಕಾರ ಇರುಮುಡಿಯ ಮುಂದಿನ ಕಟ್ಟಿನಲ್ಲಿ ಕೆಂಪಕ್ಕಿ, ತುಪ್ಪ ತುಂಬಿದ ತೆಂಗಿನಕಾಯಿ (ನೆಯ್ಯಿ ತೇಙ), ಬೆಲ್ಲ, ಬಾಳೆಹಣ್ಣು, ವೀಳ್ಯದೆಲೆ, ಅಡಕೆ, ನಾಣ್ಯಗಳು ಇರಬೇಕು. ಹಿಂದಿನ ಕಟ್ಟಿನಲ್ಲಿ ಅಯ್ಯಪ್ಪನ ನೈವೇದ್ಯಕ್ಕೆ ಸ್ವಲ್ಪ ಅಕ್ಕಿ ಇದ್ದರೆ ಸಾಕು.
ಸುಗಂಧ ದ್ರವ್ಯ (ಪನ್ನೀರ್, ಹೂವಿನ ಎಣ್ಣೆ ಇತ್ಯಾದಿ), ಅಗರಬತ್ತಿ, ಕರ್ಪೂರ ಇತ್ಯಾದಿಗಳನ್ನು ತರಲೇ ಬಾರದು.
ಶಬರಿಮಲೆಯಲ್ಲಿ ತ್ಯಾಜ್ಯ ರಾಶಿ ಬೀಳುತ್ತಿರುವ ಹಿನ್ನೆಲೆಯಲ್ಲಿ ಕರ್ಪೂರ, ಅಗರಬತ್ತಿ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಅಯ್ಯಪ್ಪನ ಅರ್ಚನೆಗೆ ಈ ವಸ್ತುಗಳ ಅಗತ್ಯ ಇಲ್ಲ ಎಂದು ತಂತ್ರಿಗಳು ತಿಳಿಸಿದ್ದಾರೆ.
ನವೆಂಬರ್ 15ರಿಂದ ಶಬರಿಮಲೆ ಮಂಡಲ, ಮಕರ ಜ್ಯೋತಿ ಯಾತ್ರೆ ಆರಂಭವಾಗಲಿದೆ. ಈ ಬಾರಿ ಮಂಡಲ ಯಾತ್ರೆಯ ಮೊದಲ ದಿನದಿಂದ 18 ಗಂಟೆಗಳ ದರ್ಶನ ಸೌಲಭ್ಯ ಒದಗಿಸಲಾಗುತ್ತದೆ. ಪ್ರತಿ ದಿನ ದರ್ಶನ ಪಡೆಯುವ ಭಕ್ತರ ಸಂಖ್ಯೆಯನ್ನು 80 ಸಾವಿರ ಮಂದಿಗೆ ಸೀಮಿತಗೊಳಿಸಲಾಗಿದೆ.
ನವೆಂಬರ್ 16ರ ವೃಶ್ಚಿಕ 1ರಂದು ಬೆಳಗ್ಗೆ 3 ಗಂಟೆಗೆ ದೇಗುಲದ ಬಾಗಿಲು ತೆರೆಯಲಾಗುವುದು. ಮಧ್ಯಾಹ್ನದ ಪೂಜೆ ಬಳಿಕ 1 ಗಂಟೆಗೆ ದೇಗುಲ ಮುಚ್ಚಲಾಗುವುದು. ಸಂಜೆ 3 ಗಂಟೆಗೆ ಮತ್ತೆ ತೆರೆದು ರಾತ್ರಿ 11 ಗಂಟೆಗೆ ಮುಚ್ಚಲಾಗುವುದು. ಈ ಸಲದ ಯಾತ್ರೆಗೆ ಹಲವಾರು ಬದಲಾವಣೆಗಳೊಂದಿಗೆ ವ್ಯಾಪಕ ತಯಾರಿ ಮಾಡಲಾಗಿದೆ.
18 ಮೆಟ್ಟಿಲ ಮೂಲಕ ಪ್ರತಿ ನಿಮಿಷ 75 ಯಾತ್ರಿಕರನ್ನು ದಾಟಿಸಲಾಗುವುದು. ಇಲ್ಲಿ ಅನುಭವಿ ಹಾಗೂ ಯುವ ಪೊಲೀಸರನ್ನು ನಿಯೋಜಿಸಲಾಗುವುದು.
ಭದ್ರತೆಗೆ 13,600 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಮೊಬೈಲ್ ನೆಟ್‌ವರ್ಕ್ ಕವರೇಜ್ ಹೆಚ್ಚಿಸಲು ಬಿಎಸ್ಸೆನ್ನೆಲ್ 22 ಮೊಬೈಲ್ ಟವರ್‌ಗಳನ್ನು ಅಳವಡಿಸಲಾಗಿದೆ. ಪ್ರಮುಖ ರೈಲು ನಿಲ್ದಾಣಗಳಲ್ಲಿ ಪೊಲೀಸ್ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ.
ಕಾಡಿನ ಹಾದಿಯಲ್ಲಿ ಬರುವ ಯಾತ್ರಾರ್ಥಿಗಳ ಅನುಕೂಲಕ್ಕೆ ಅರಣ್ಯ ಇಲಾಖೆ 132 ಸೇವಾ ಕೇಂದ್ರಗಳನ್ನು ತೆರೆಯಲಿದೆ. ಯಾತ್ರಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು 1500 ಎಕೋ ಗಾರ್ಡ್‌ಗಳನ್ನು ನಿಯೋಜಿಸಲಾಗುವುದು. ಎಲಿಫೆಂಟ್ ಸ್ಕ್ವಾಡ್, ಹಾವು ಹಿಡಿಯುವವರ ಸೇವೆಯೂ ಲಭ್ಯವಿದೆ. ಯಾತ್ರಾರ್ಥಿಗಳು ಸಂಚರಿಸುವ ಎಲ್ಲ ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರು ಒದಗಿಸಲು ಜಲ ಮಂಡಳಿ ಕ್ರಮ ಕೈಗೊಂಡಿದೆ. ಚೆಂಗನ್ನೂರು, ಎರುಮೇಲಿ, ಪಂಪಾ ಸೇರಿದಂತೆ ಎಲ್ಲ ಸ್ನಾನಘಟ್ಟಗಳಲ್ಲಿ ನೀರಾವರಿ ಇಲಾಖೆ ಸುರಕ್ಷತಾ ಬೇಲಿಗಳನ್ನು ನಿರ್ಮಿಸಿದೆ. ನಾನಾ ಭಾಷೆಗಳಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಪಂಪಾಗೆ ಸರಬರಾಜಾಗುವ ನೀರಿನ ಗುಣಮಟ್ಟವನ್ನು ಜಲ ಪ್ರಾಧಿಕಾರದ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದ ಮೂಲಕ ಪ್ರತಿ ಗಂಟೆಗೆ ಪರೀಕ್ಷಿಸಲಾಗುವುದು.
ವಿಶ್ವ ವಿಖ್ಯಾತ ನರ ಶಸ್ತ್ರಚಿಕಿತ್ಸೆ ತಜ್ಞ ಡಾ.ರಾಮನಾರಾಯಣನ್ ನೇತೃತ್ವದಲ್ಲಿ100ಕ್ಕೂ ಹೆಚ್ಚು ತಜ್ಞ ವೈದ್ಯರು ‘ಡಿವೋಟೀಸ್ ಆಫ್ ಡಾಕ್ಟರ್ಸ್’ ಹೆಸರಿನಲ್ಲಿ ಉಚಿತ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ. ಮೋಟಾರು ವಾಹನ ಇಲಾಖೆಯು ಸೇಫ್ ಝೋನ್ ಯೋಜನೆಯನ್ನು ವಿಸ್ತರಿಸಲಿದೆ. ಗಸ್ತು ತಿರುಗಲು 20 ಸ್ಕ್ವಾಡ್‌ಗಳನ್ನು ನಿಯೋಜಿಸಲಾಗುವುದು.