ನರಕ ತಪ್ಪಿತು ನಿಜ ಧರ್ಮಜಂಗೆ ಆದೊಡೇಂ|
ನರಕ ದರ್ಶನದ ದುಃಖ ತಪ್ಪದಾಯಿತಲ||
ದುರಿತತರುವಾರು ನೆಟ್ಟುದೊ ನಿಮಗುಂಟು ಫಲ|
ಚಿರ ಋಣದ ಲೆಕ್ಕವದು- ಮಂಕುತಿಮ್ಮ||
ಧರ್ಮರಾಯನಿಗೆ ನರಕ ತಪ್ಪಿದ್ದು ನಿಜ. ಆದರೆ ನರಕದ ದರ್ಶನದ ದುಃಖ ತಪ್ಪಲೇ ಇಲ್ಲ. ಕೆಡುಕಿನ ಗಿಡವನ್ನು ಯಾರು ನೆಡುತ್ತಾರೊ ಅವರು ಅದರ ಫಲವನ್ನು ಅನುಭವಿಸಲೇ ಬೇಕಾಗುತ್ತದೆ. ಇದು ಶಾಶ್ವತವಾದ ಋಣದ ಲೆಕ್ಕ ಸಂದಾಯ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಧರ್ಮರಾಯ ಮಹಾಭಾರತದಲ್ಲಿ ಬರುವ ಆದರ್ಶ ಪುರುಷ. ಸತ್ಯ, ನ್ಯಾಯ, ನೀತಿ ಧರ್ಮವನ್ನು ತನ್ನ ಬದುಕಿನುದ್ದಕ್ಕೂ ಅನುಸರಿಸಿದವನು. ಕೃಷ್ಣನ ಒತ್ತಾಸೆಯಿಂದಾಗಿ ಹೇಳಿದ ‘ಅಶ್ವತ್ಥಾಮ ಹತಃ ಕುಂಜರ’ ಎಂಬ ಒಂದು ಮಾತಿನಿಂದಾಗಿ ನರಕದವರೆಗೂ ಹೋಗಿ ಬರಬೇಕಾಯಿತು. ಇದು ನಮಗೊಂದು ಪಾಠ. ಕರ್ಮಕ್ಕೆ ತಕ್ಕ ಫಲವನ್ನು ಅನುಭವಿಸಬೇಕಾಗುತ್ತದೆ. ಕೆಡುಕನ್ನು ಮಾಡಿದರೆ ಕಟ್ಟ ಫಲವನ್ನೇ ಅನುಭವಿಸಬೇಕಾಗುತ್ತದೆ. ಒಳ್ಳೆಯ ಫಲವನ್ನು ಅನುಭವಿಸಬೇಕಾದರೆ ಅದಷ್ಟು ಒಳ್ಳೆಯದನ್ನೆ ಮಾಡಬೇಕಾಗುತ್ತದೆ.
ಹಿಂದೆ ನೀನೆಸಗಿರ್ದ ಕರ್ಮಗಳನನುಸರಿಸಿ|
ಹೊಂದಿರುವ ನೀಂ ಪಡುವ ಸುಖದುಃಖವ||
ವಂದಿಸದೆ ನಿಂದಿಸದೆ ನಿನ್ನೊಳಿತು ಕೆಡಕಿಂಗೆ|
ಬಂದುದನ್ನುಭವಿಸು- ಬೋಳುಬಸವ||
ಎಂದು ಕವಿ ನಿಜಗುಣರು ನುಡಿದಂತೆ ನಾವು ಮಾಡಿದ ಕರ್ಮಗಳನ್ನು ಅನುಸರಿಸಿಯೇ ಸುಖದುಃಖಗಳು ಬರವುದು. ಸುಖ ಬಂದಾಗ ಹಿಗ್ಗಿ ಮೈಮರೆಯದೆ ದುಃಖ ಬಂದಾಗ ಕುಗ್ಗದೆ ಎಲ್ಲವೂ ನಾವೇ ಕರ್ಮದ ಫಲವೆಂದು ಭಾವಿಸಿ ಸಂತೋಷವಾಗಿಯೇ ಅನುಭವಿಸಬೇಕು. ನಾವು ಮಾಡಿದ ಕೆಡುಕನ್ನು ತಪ್ಪಿಸಲು ಯಾವ ತಂತ್ರದಿಂದಲೂ ಸಾಧ್ಯವಿಲ್ಲ. ‘ಉಪ್ಪು ತಿಂದವ ನೀರು ಕುಡಿಯಲೇ ಬೇಕು’ ಎಂಬ ಗಾದೆಯಂತೆ ಇಂದಲ್ಲ ನಾಳೆ ನಮ್ಮ ಕರ್ಮದ ಫಲವನ್ನು ಅನುಭವಿಸಲೇಬೇಕಾಗುತ್ತದೆ.
“ಏಕ ಏವ ಸುಹೃದ್ಧರ್ಮೋ ನಿಧನೇsಪ್ಯನುಯೂತಿ ಯಃ ಶರೀರೇಣ ಸಮಂ ನಾಶಂ ಸರ್ವಮನ್ಯದ್ಧಿ ಗಚ್ಛತಿ” ಎಂಬ ಸುಭಾಷಿತ ಹೇಳುವಂತೆ ನಾವು ಮಾಡಿದ ಒಳ್ಳೆಯ ಕಾರ್ಯಗಳೆಂಬ ಧರ್ಮವು ಮಾತ್ರವೇ ನಿಜವಾದ ಸ್ನೇಹಿತ. ಮರಣದ ಅನಂತರವೂ ಅದು ನಮ್ಮ ಜತೆಯಲ್ಲಿದ್ದು ಕಾಪಾಡುತ್ತದೆ. ಇನ್ನುಳಿದ ಎಲ್ಲ ಸಂಪತ್ತುಗಳೂ ಶರೀರದ ಜತೆಯಲ್ಲೇ ನಾಶವಾಗಿಬಿಡುತ್ತವೆ. ಆದ್ದರಿಂದ ಆದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಸಾಗಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಸಾಪ ಕಾರ್ಕಳ ಘಟಕ ಅಧ್ಯಕ್ಷರು