ಪುತ್ತೂರು: ಪುತ್ತೂರು: ಯಾವುದೇ ಅಪರಾಧವನ್ನು ಮಾಡಿ ಪೋಲಿಸ್ ಕೇಸುಗಳಾದರೆ ಅದರಿಂದ ಬಿಡಿಸಿಕೊಳ್ಳುವುದು ತುಂಬಾ ಕಷ್ಟ, ಇದರಿಂದ ವಿದ್ಯಾರ್ಥಿಯೊಬ್ಬನ ಜೀವನವೇ ಹಾಳಾಗಬಹುದು ಹೀಗಾಗಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸುವುದು ಆವಶ್ಯಕ ಎಂದು ಪುತ್ತೂರಿನ ಮಹಿಳಾ ಠಾಣೆಯ ಪೋಲಿಸ್ ಸಬ್-ಇನ್ಸ್‌ಪೆಕ್ಟರ್ ಭವಾನಿ ಗೌಡ ಹೇಳಿದರು.
ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಂಟಿ ರ್ಯಾಗಿಂಗ್ ಕಮಿಟಿ, ಆಂಟಿ ರ್‍ಯಾಗಿಂಗ್ ಸ್ಕ್ವಾಡ್ ಮತ್ತು ಕಾಲೇಜು ಆಂತರಿಕ ದೂರು ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತಾಡಿದರು.
ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಕಠಿಣ ಕಾನೂನುಗಳಿದ್ದು ಇದರ ಸದ್ಭಳಕೆಯನ್ನು ಮಾಡಿಕೊಳ್ಳಬೇಕು. ಸುಳ್ಳು ದೂರುಗಳನ್ನು ನೀಡುವುದು ಕೂಡಾ ಅಪರಾಧವಾಗುತ್ತದೆ ಎಂದರು. ವಿವಿಧ ದೂರುಗಳನ್ನು ಆಧರಿಸಿ ತಮ್ಮ ಅನುಭವಗಳನ್ನು ಎಳೆ ಎಳೆಯಾಗಿ ಹಂಚಿಕೊಂಡ ಅವರು ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಪೋಕ್ಸೋ ಕಾಯ್ದೆ, ಬಾಲಕಾರ್ಮಿಕರು, ಬಾಲ್ಯವಿವಾಹ ಸೈಬರ್ ಕ್ರೈಂ ಗಳ ಬಗ್ಗೆ ಮಾಹಿತಿ ನೀಡಿದರು. ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿದರೆ ಏನೂ ತೊಂದರೆಯಾಗದು. ಯಾವುದೇ ರೀತಿಯ ತೊಂದರೆ ಅಥವಾ ಕಿರುಕುಳಗಳು ಸಂಭವಿಸಿದರೆ ತಕ್ಷಣ ಪೋಲೀಸರಿಗೆ ಮಾಹಿತಿಯನ್ನು ನೀಡಬೇಕು ಎಂದರು. ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಬೇಕು. ತಾವು ವಾಹನವನ್ನು ಚಲಾಯಿಸುವಾಗ ತನ್ನಂತೆ ಇತರರೂ ವಾಹನ ಚಲಾಯಿಸುತ್ತಿದ್ದಾರೆ ಎನ್ನುವ ಪ್ರಜ್ಞೆ ಮನಸ್ಸಿನಲ್ಲಿರಬೇಕು ಅಲ್ಲದೆ ಮನೆಯಲ್ಲಿ ನಮ್ಮನ್ನು ಕಾಯುವ ಹಿರಿಯ ಜೀವಗಳಿವೆ ಎನ್ನುವುದೂ ತಿಳಿದಿರಬೇಕು ಎಂದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ ಮತ್ತು ಕಾಲೇಜು ಆಂತರಿಕ ದೂರು ಸಮಿತಿಯ ಮುಖ್ಯಸ್ಥೆ ಡಾ.ಸೌಮ್ಯ.ಎನ್.ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಂಟಿ ರ್‍ಯಾಗಿಂಗ್ ಸ್ಕ್ವಾಡ್‌ನ ಪ್ರೊ.ವೆಂಕಟೇಶ್.ವೈ.ಸಿ ಮತ್ತು ಪ್ರೊ.ನವೀಸ್.ಎಸ್.ಪಿ ಕಾರ್ಯಕ್ರಮ ಸಂಯೋಜಿಸಿದರು. ಪ್ರೊ.ರೇಶ್ಮಾ ಪೈ ಸ್ವಾಗತಿಸಿ, ನಿರ್ವಹಿಸಿದರು.