ಪುತ್ತೂರು: ಮುಂಬೈ ವಿಶ್ವವಿದ್ಯಾನಿಲಯದ ಮುಖ್ಯಸ್ಥ, ನಿವೃತ್ತ ಉಪನ್ಯಾಸಕ, ಸಾಹಿತಿ ಡಾ.ತಾಳ್ತಜೆ ವಸಂತ ಕುಮಾರ್ ಅವರಿಗೆ ಪಿಎಚ್ ಡಿ ಪದವಿ ಲಭಿಸಿದೆ. ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ ಎಂಬ ವಿಷಯದಲ್ಲಿ ಪಿಎಚ್ ಡಿ ಪದವಿ ಪಡೆದಿರುತ್ತಾರೆ.
ದಿ. ಕೃಷ್ಣ ಭಟ್ಟ ಹಾಗೂ ಲಕ್ಷ್ಮಿ ಅವರ ಸುಪುತ್ರನಾದ ಡಾ. ತಾಳ್ತಜೆ ವಸಂತ ಕುಮಾರ ಸುದೀರ್ಘ 37 ವರ್ಷಗಳ ಕಾಲ ಉಪನ್ಯಾಸಕ ವೃತ್ತಿಯನ್ನು ಮಾಡಿದ್ದು, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಹಾಗೂ ಮುಂಬೈ ವಿಶ್ವವಿದ್ಯಾನಿಲಯದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಅವರ ಮಾರ್ಗದರ್ಶನದಲ್ಲಿ 17 ಮಂದಿ ಪಿಎಚ್‌ಡಿ ಹಾಗೂ 18 ಮಂದಿ ಎಂಫಿಲ್ ಪಡೆಡಿರುತ್ತಾರೆ.
ಸಾಹಿತ್ಯ ಕ್ಷೇತ್ರದಲ್ಲಿ 55 ವರ್ಷಗಳ ಸುದೀರ್ಘ ಸೇವೆಯನ್ನು ನೀಡಿದ ಇವರು ಈವರೆಗೆ ಒಟ್ಟು 24 ಕೃತಿಗಳನ್ನು ರಚಿಸಿದ್ದು, ಅವರು ರಚಿಸಿದ ಅನೇಕ ಲೇಖನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 1993ರಲ್ಲಿ ಭಾರತ ಜರ್ಮನಿ ಸಾಂಸ್ಕೃತಿಕ ವಿನಿಮಯ ಯೋಜನೆಯ ಅನ್ವಯ ಜರ್ಮನ್ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಹಾಗೂ ಕರ್ನಾಟಕದ ವಿಷಯದಲ್ಲಿ ಉಪನ್ಯಾಸ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ರಾಜ್ಯ ಘಟಕದ ಸ್ಥಾಪಕ ಅಧ್ಯಕ್ಷರಾಗಿಯೂ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಇತ್ತೀಚಿಗೆ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.