ಹಿಂದೆ ರೌಡಿಗಳು ಮಾಡುತ್ತಿದ್ದ ಕೆಲಸ ಈಗ ಸಚಿವರಿಂದ ಎಂದು ಲೇವಡಿ
ಬೆಂಗಳೂರು : ಹಿಂದೆ ಬೆಂಗಳೂರಿನಲ್ಲಿ ರೌಡಿಗಳು ಹಫ್ತಾ ವಸೂಲಿ ಮಾಡುತ್ತಿದ್ದರು ಈಗ ಕಾಂಗ್ರೆಸ್ ಸಚಿವರೇ ಹಫ್ತಾ ವಸೂಲಿಗೆ ಇಳಿದಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಅಬಕಾರಿ ಇಲಾಖೆ ಮದ್ಯದಂಗಡಿಗಳಿಂದ ‘ಮಂಥ್ಲಿ ಮನಿ’ ಹೆಸರಿನಲ್ಲಿ ಲಂಚ ಪಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ ಅಶೋಕ್, ಅಬಕಾರಿ ಸಚಿವ ತಿಮ್ಮಾಪುರ ವಾರಕ್ಕೆ 18 ಕೋಟಿ ರೂ. ಮದ್ಯದಂಗಡಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ಮದ್ಯದಂಗಡಿ ಮಾಲೀಕರೇ ದೂರು ಕೊಟ್ಟಿದ್ದಾರೆ. ರಾಜ್ಯದಲ್ಲಿ 11 ಸಾವಿರಕ್ಕೂ ಹೆಚ್ಚು ವೈನ್ಶಾಪ್ಗಳಿವೆ. ಪ್ರತಿಯೊಂದರಿಂದ 20 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ವಿರುದ್ಧ ಹಿಂದೆ ಪೇಸಿಎಂ ಪೋಸ್ಟರ್ ಅಂಟಿಸಿದ್ದಿರಿ. ಆಗ ನಾವು ನಿಮ್ಮನ್ನು ಸನ್ಮಾನ ಮಾಡಲು ಆಗಲಿಲ್ಲ. ಈಗ ಪೇಸಿಎಂ ಪೋಸ್ಟರ್ ಅಂಟಿಸಿದಾಗ ಹೇಳಿ ಬಂದು ಸನ್ಮಾನ ಮಾಡುತ್ತೇವೆ ಎಂದು ಅಶೋಕ್ ವ್ಯಂಗ್ಯವಾಡಿದರು.
ಲೋಕಾಯುಕ್ತ ಅಧಿಕಾರಿಗಳಿಂದ ಸಿದ್ದರಾಮಯ್ಯ ವಿಚಾರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್, ಈ ಸರಕಾರದಲ್ಲಿ ಪ್ರತಿನಿತ್ಯ ಒಬ್ಬರಲ್ಲ ಒಬ್ಬ ಸಚಿವರು ಲೂಟಿ ಹೊಡೆಯುತ್ತಿದ್ದಾರೆ. 40 ವರ್ಷದ ರಾಜಕೀಯ ಜೀವನ ತೆರೆದ ಪುಸ್ತಕ ಎಂದಿದ್ದರು. ತೆರೆದ ಪುಸ್ತಕ ಎಂದವರು ಲೋಕಾಯುಕ್ತ ವಿಚಾರಣೆಗೆ ಹೋಗಿದ್ದಾರೆ. ಮುಖ್ಯಮಂತ್ರಿ ಆಗಿ ವಿಚಾರಣೆ ಎದುರಿಸುತ್ತಿದ್ದಾರೆ, ನಾಚಿಕೆ ಆಗಲ್ವಾ ಎಂದು ಅಶೋಕ್ ಪ್ರಶ್ನಿಸಿದರು.
ಬೆಳಗ್ಗೆ ವಿಚಾರಣೆ ಅಂತೆ, ಮಧ್ಯಾಹ್ನ ಪ್ರಚಾರ ಅಂತೆ. ಸಿಎಂ ಮೊದಲೇ ಟೈಮ್ ಫಿಕ್ಸ್ ಮಾಡಿಕೊಂಡು ಹೋಗಿದ್ದಾರೆ. ಇದೇನು ಮ್ಯಾಚ್ ಫಿಕ್ಸಿಂಗ್ ಕೇಸಾ ಎಂದು ವ್ಯಂಗ್ಯವಾಡಿದ್ದಾರೆ. ತನಿಖಾಧಿಕಾರಿಗಳು ಎಷ್ಟು ಹೊತ್ತು ವಿಚಾರಣೆ ನಡೆಸ್ತಾರೆಂದು ಗೊತ್ತಾ? ಇವರೇ ಲೋಕಾಯುಕ್ತ ವಿಚಾರಣೆಗೆ ಸಮಯ ನಿಗದಿ ಮಾಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.