ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ; ಸಚಿವರೇ ಲಂಚ ವಸೂಲಿ ಮಾಡಿದ ಆರೋಪ
ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ವಿರೋಧಿಸಿ ನ.20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್ ಮಾಡಲು ರಾಜ್ಯದ ಮದ್ಯ ಮಾರಾಟಗಾರರು ನಿರ್ಧರಿಸಿದ್ದಾರೆ.
ಈ ಕುರಿತು ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಗುರುಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾಗೂ ಇಲಾಖೆಯಲ್ಲಿನ ಭ್ರಷ್ಟಾಚಾರ ತೊಡೆದುಹಾಕಲು ಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮೊದಲನೇ ಹಂತದಲ್ಲಿ ಅ.25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಈಗ ಎರಡನೇ ಹಂತದ ಹೋರಾಟದಲ್ಲಿ ಮದ್ಯ ಮಾರಾಟಗಾರರ ಬೇಡಿಕೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲು, ಅಬಕಾರಿ ಇಲಾಖೆಯಲ್ಲಿ ಮೀತಿ ಮೀರಿದ ಭ್ರಷ್ಟಾಚಾರ ನಿಗ್ರಹಿಸಲು ಕ್ರಮ ಕೈಗೊಳ್ಳುವುದು ಹಾಗೂ ಅಬಕಾರಿ ಇಲಾಖೆಯ ಉಸ್ತುವಾರಿಯನ್ನು ಆರ್ಥಿಕ ಸಚಿವರೇ ವಹಿಸಿಕೊಳ್ಳಬೇಕೆನ್ನುವ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನ.20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ, ಮುಡಾ ನಿವೇಶನ ಹಗರಣದ ಬೆನ್ನಲ್ಲೇ ಅಬಕಾರಿ ಇಲಾಖೆಯಲ್ಲಿ ಭಾರಿ ಮೊತ್ತದ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದು ಕಾಂಗ್ರೆಸ್ ಸರಕಾರ ಮತ್ತೆ ಮುಜುಗರಕ್ಕೀಡಾಗಿದೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಇಲಾಖಾ ಅಧಿಕಾರಿಗಳ ವರ್ಗಾವಣೆ ಹಾಗೂ ಪರವಾನಗಿ ನೀಡಿಕೆಗೆ ಲಂಚದ ಜತೆಗೆ ಮದ್ಯದಂಗಡಿಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ.
ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಹೆಸರಿನಲ್ಲಿ ಈ ಸಂಬಂಧ ರಾಜ್ಯಪಾಲರು, ರಾಜ್ಯ ಮುಖ್ಯಕಾರ್ಯದರ್ಶಿ ಹಾಗೂ ಲೋಕಾಯುಕ್ತರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಕೆಯಾಗಿದೆ. ಆದರೆ ಫೆಡರೇಷನ್ ಯಾವುದೇ ದೂರು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಒಂದೇ ದಿನ 16 ಕೋ. ರೂ. ಲಂಚ ಸಂಗ್ರಹ
ಚುನಾವಣೆ ವೆಚ್ಚಕ್ಕಾಗಿ ಸಚಿವರ ಕಚೇರಿಯಿಂದ ಅಕ್ರಮವಾಗಿ ಹಣ ಸಂಗ್ರಹ ಮಾಡಲಾಗುತ್ತಿದೆ. ಮೂವರು ಉಪಅಬಕಾರಿ ಆಯುಕ್ತರು, 9 ಅಬಕಾರಿ ಅಧೀಕ್ಷರು, 13 ಉಪಅಧೀಕ್ಷಕರು ಹಾಗೂ 20 ಅಬಕಾರಿ ಇನ್ಸ್‌ಪೆಕ್ಟರ್‌ಗಳನ್ನು ಬೆಂಗಳೂರು ಸುತ್ತಮುತ್ತ ಪೋಸ್ಟಿಂಗ್ ಮಾಡಿ ಒಂದೇ ದಿನ 16 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಈ ವರ್ಗಾವಣೆ ಮತ್ತು ಪೋಸ್ಟಿಂಗ್‌ನಲ್ಲಿ ತಲಾ 25ರಿಂದ 40 ಲಕ್ಷ ರೂ.ವರೆಗೆ ಸಂಗ್ರಹ ಮಾಡಲಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಇದರಿಂದ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಪ್ರತಿಪಕ್ಷಗಳಿಗೆ ಮತ್ತೊಂದು ಪ್ರಮುಖ ಅಸ್ತ್ರವೊಂದು ಸಿಕ್ಕಂತಾಗಿದೆ.
ಈ ಆರೋಪವನ್ನು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಳ್ಳಿಹಾಕಿದ್ದಾರೆ. ಅಂಥದ್ದೇನೂ ನಡೆದಿಲ್ಲ, ಎಲ್ಲವೂ ಸರಿ ಇದ್ದರೆ ಲಂಚ ಕೊಡುವ ಅಗತ್ಯ ಏನಿರುತ್ತದೆ? ಮದ್ಯ ಮಾರಾಟಗಾರರಿಗೆ ನಮ್ಮ ಇಲಾಖೆಯಲ್ಲಿ ಲಂಚಕ್ಕಾಗಿ ಕಿರುಕುಳ ನೀಡುತ್ತಿದ್ದರೆ ಹೇಳಲಿ. ಒಂದು ವೇಳೆ ಯಾರಾದರೂ ಈ ರೀತಿ ಹಣ ಸಂಗ್ರಹಿಸಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
700 ಕೋಟಿ ಹಗರಣ
ವೈನ್ ಮರ್ಚಂಟ್‌ಗಳ ಸಂಘದ ದೂರಿನಿಂದಾಗಿ ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರದ ಮತ್ತೊಂದು ಕರಾಳ ಮುಖ ಹೊರಬಂದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ರಾಜ್ಯದಲ್ಲಿ ಸಿಎಲ್-7 ಪರವಾನಗಿ ನೀಡಲು ಅಬಕಾರಿ ಸಚಿವರು ತಲಾ 30ರಿಂದ 70 ಲಕ್ಷ ರೂ.ವರೆಗೆ ಲಂಚ ಪಡೆಯುತ್ತಿದ್ದಾರೆ. ಕಳೆದೊಂದು ವರ್ಷದಲ್ಲಿ 1 ಸಾವಿರಕ್ಕೂ ಹೆಚ್ಚು ಲೈಸೆನ್ಸ್ ನೀಡಲಾಗಿದ್ದು, ಅಕ್ರಮವಾಗಿ ಸಂಗ್ರಹಿಸಿರುವ ಮೊತ್ತ ಸುಮಾರು 700 ಕೋಟಿ ರೂ. ಆಗಿದೆ ಎಂದು ಹೇಳಿದ್ದಾರೆ.
ವಾಲ್ಮೀಕಿ ನಿಗಮದ ಅಕ್ರಮ, ಮುಡಾ ಹಗರಣ, ಕೆಐಎಡಿಬಿ ಭೂ ಹಗರಣ, ವಕ್ಫ್ ಆಸ್ತಿ ವಿವಾದದ ಬಳಿಕ ಲಿಕ್ಕರ್ ಹಗರಣ ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರದ ಸರಣಿಗೆ ಹೊಸ ಸೇರ್ಪಡೆ ಎಂದು ಅಶೋಕ್ ಟೀಕಿಸಿದ್ದಾರೆ.