ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2024-25ನೇ ಸಾಲಿನ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಶಿಕ್ಷಣ ಕಾರ್ಯಕ್ರಮ ಮಹಾವಿದ್ಯಾಲಯದ ಸುಜ್ಞಾನ ದೀಪಿಕಾ ಸಭಾಂಗಣದಲ್ಲಿ ನಡೆಯಿತು.
ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿ(ಸ್ವಾಯತ್ತ)ನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಲಕ್ಷ್ಮೀನಾರಾಯಣ ಕೆ.ಎಸ್. ಕಾರ್ಯಕ್ರಮ ಉದ್ಘಾಟಿಸಿ, ಎನ್.ಎಸ್.ಎಸ್.ನ ಹುಟ್ಟು, ಬೆಳವಣಿಗೆ, ಕಾರ್ಯಕ್ರಮಗಳ ರೂಪುರೇಷೆ ಹಾಗೂ ವಿದ್ಯಾರ್ಥಿಗಳು ಯಾವ ರೀತಿ ಈ ಘಟಕದಲ್ಲಿ ತಮ್ಮನ್ನು ತಾವು ತೊಡಗಿಸಬಹುದು ಎಂಬುದನ್ನು ವಿವರಿಸಿದರು. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಓದು ಎನ್ನುವುದು ಅಂಕಕ್ಕೆ ಸೀಮಿತವಾಗುತ್ತಿದೆ. ಆದರೆ ಕಾನೂನು ವಿದ್ಯಾರ್ಥಿಗಳು ಅಂಕಕ್ಕೆ ಮಾತ್ರ ಸೀಮಿತರಾಗದೇ, ಸಮಾಜದ ಆಗುಹೋಗುಗಳನ್ನು ತಿಳಿದುಕೊಳ್ಳಬೇಕಾದುದು ಅನಿವಾರ್ಯವಾಗಿದೆ. ಈ ಹಿನ್ನಲೆನಲ್ಲಿ ಸ್ಥಾಪನೆಗೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳನ್ನು ಪಠ್ಯದ ಜೊತೆಗೆ ತನ್ನ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಸಮಾಜಮುಖಿಯನ್ನಾಗಿ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಎನ್. ಎಸ್. ಎಸ್. ಘಟಕದ ವತಿಯಿಂದ ನಿರ್ವಹಿಸುವ ‘ಸೇವಾಬಿಂಬ’ ಭಿತ್ತಿಪತ್ರಿಕೆಯ ಸಂಚಿಕೆ ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಖಜಾಂಚಿ ಯಶೋಧರ ಜೈನ್ ಮಾತನಾಡಿ, ಬದಲಾಗುತ್ತಿರುವ ಭಾರತದಲ್ಲಿ ಯುವಶಕ್ತಿಯ ಸದ್ಭಳಕೆಯಾದಾಗ ದೇಶದ ಅಭಿವೃದ್ಧಿಯಾಗುತ್ತಿದೆ. ಇದಕ್ಕಾಗಿ ಯುವಶಕ್ತಿಯ ಅನಾವರಣಗೊಳ್ಳಬೇಕಾದರೆ ಸಾಂಘಿಕ ಪ್ರಯತ್ನ ನಡೆಯಬೇಕು. ಕಾನೂನು ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅಂತಹ ಅವಕಾಶವನ್ನು ನಮ್ಮ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ನೀಡುತ್ತದೆ ಎಂದರು.
ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ. ಪಿ. ಶುಭಹಾರೈಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ಎ. ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀರಕ್ಷಾ, ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿ ನಾಯಕರಾದ ಪ್ರಣಾಮ್ಯ ಪಕಳ, ಸಂಪ್ರೀತಾ ಹಾಗೂ ಧನಿಷ್ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿ ನಾಯಕ ಪೃಥ್ವಿ ಸಾಗರ್ ಸ್ವಾಗತಿಸಿ, ಎನ್.ಎಸ್.ಎಸ್. ಸ್ವಯಂಸೇವಕಿ ಅಕೃತಿ ಕೆ. ವಂದಿಸಿದರು. ಎನ್.ಎಸ್.ಎಸ್. ಸ್ವಯಂಸೇವಕಿ ಭೂಮಿಕಾ ಬಿ. ಬಿ. ನಿರೂಪಿಸಿದರು.