ಇನ್ನೂ ಒಂದೂವರೆ ಕೋಟಿ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆಯಾಗಿಲ್ಲ
ಬೆಂಗಳೂರು: ಸಾರಿಗೆ ಇಲಾಖೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ಗಡುವನ್ನು ಮತ್ತೊಮ್ಮೆ ವಿಸ್ತರಿಸಿ ವಾಹನ ಮಾಲಕರಿಗೆ ತುಸು ನೆಮ್ಮದಿ ನೀಡಿದೆ. ಈಗಾಗಲೇ ಮೂರಕ್ಕೂ ಅಧಿಕ ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ. ಆದರೆ ಇನ್ನೂ ಸುಮಾರು 1.5 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಬಾಕಿ ಇರುವುದರಿಂದ ಅಂತಿಮ ಗಡುವನ್ನು ವಿಸ್ತರಣೆ ಮಾಡಲಾಗಿದೆ.
ಸಾರಿಗೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪಾ ವಿ. ಎಸ್. ಎಚ್‌ಎಸ್‌ಆರ್‌ಪಿ ಗಡುವನ್ನು ನವೆಂಬರ್ 30ರ ತನಕ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ಸಾರಿಗೆ ಇಲಾಖೆ ಏಪ್ರಿಲ್ 1, 2019ಕ್ಕೂ ಮೊದಲು ನೋಂದಣಿಯಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ಆದೇಶ ಹೊರಡಿಸಿತ್ತು. ಬಳಿಕ ಮೂರಕ್ಕೂ ಅಧಿಕ ಬಾರಿ ಈ ಗಡುವು ವಿಸ್ತರಣೆ ಮಾಡಲಾಗಿದೆ. ಈಗ ಮತ್ತೊಮ್ಮೆ ವಾಹನ ಮಾಲೀಕರಿಗೆ ನವೆಂಬರ್ 30ರ ತನಕ ಗಡುವು ನೀಡಲಾಗಿದೆ.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದ ವಾಹನಗಳಿಗೆ ಮೊದಲು ದಂಡ ವಿಧಿಸಲು ತೀರ್ಮಾನಿಸಲಾಗಿತ್ತು. ಆದರೆ ಹೈಕೋರ್ಟ್‌ಗೆ ಸರ್ಕಾರ ದಂಡ ವಿಧಿಸುವುದಿಲ್ಲ ಎಂದು ಹೇಳಿದೆ. ಈಗ ವಾಹನದ ಮಾಲೀಕರಿಗೆ ಮತ್ತೊಂದು ಅವಕಾಶ ನೀಡಲಾಗಿದ್ದು, ನವೆಂಬರ್ 30ರ ಬಳಿಕ ದಂಡ ವಿಧಿಸುವ ಕುರಿತು ಸಾರಿಗೆ ಇಲಾಖೆ ತೀರ್ಮಾನ ಕೈಗೊಳ್ಳಲಿದೆ.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಆ ಪ್ರಕಾರ ರಾಜ್ಯ ಸಾರಿಗೆ ಇಲಾಖೆ ಆದೇಶವನ್ನು ಹೊರಡಿಸಿತ್ತು. ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸುಮಾರು 2 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿದೆ. ಈವರೆಗೆ 50 ಲಕ್ಷ ವಾಹನಗಳು ಮಾತ್ರ ಅಳವಡಿಸಿಕೊಂಡಿದ್ದು, ಇನ್ನೂ 1.50 ಕೋಟಿ ವಾಹನಗಳಿಗೆ ಅಳವಡಿಕೆ ಮಾಡಬೇಕಿದೆ.
ಜನರು ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಆಸಕ್ತಿ ತೋರುತ್ತಿಲ್ಲ. ಇದಕ್ಕಾಗಿ ಆನ್‌ಲೈನ್ ಮೂಲಕ ಮಾತ್ರ ನೋಂದಣಿ ಮಾಡಬೇಕಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಇದು ಸಾರಿಗೆ ಇಲಾಖೆ ತಲೆನೋವು ತಂದಿದೆ. ಆದ್ದರಿಂದ ಪದೇಪದೆ ಗಡುವು ವಿಸ್ತರಣೆ ಮಾಡಲಾಗುತ್ತಿದೆ. ಸಾರಿಗೆ ಇಲಾಖೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬಗ್ಗೆ ಜನರಲ್ಲಿರುವ ಗೊಂದಲ ಬಗೆಹರಿಸಲು ಸಹಾಯವಾಣಿಯನ್ನು ಆರಂಭಿಸಿದೆ. ಜನರು 9449863429/26 ಸಂಖ್ಯೆಗೆ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆಯಬಹುದು ಎಂದು ಇಲಾಖೆ ಹೇಳಿದೆ.
ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ನೋಂದಣಿಗೆ https://transport.karnataka.gov.in ಅಥವಾ www.siam.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಈ ವೆಬ್‌ಸೈಟ್ ಮೂಲಕ ನೋಂದಣಿಯಾದರೆ ಮಾತ್ರ ಅಧಿಕೃತ ಎಂದು ಇಲಾಖೆ ಸ್ಪಷ್ಟಪಡಿಸಿದೆ.