ಹಲವು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದ ಉಗ್ರ
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಶ್ರೀನಗರದಲ್ಲಿ ಶನಿವಾರ ಪಾಕ್ ಮೂಲದ ಲಷ್ಕರ್ ಉಗ್ರ ಸಂಘಟನೆಯ ಕಮಾಂಡರ್ ಉಸ್ಮಾನ್ ಭಾಯಿಯನ್ನು ಸಾಯಿಸಲು ಯೋಧರು ಬಳಸಿದ್ದು ಬಿಸ್ಕಿಟ್‌ಗಳನ್ನು! ಇದು ಶ್ರೀನಗರದಲ್ಲಿ 2 ವರ್ಷದಲ್ಲಿ ನಡೆದ ಮೊದಲ ಉಗ್ರ ನಿಗ್ರಹ ಕಾರ್ಯಾಚರಣೆ ಆಗಿದೆ.
ಉಸ್ಮಾನ್ ಹತ್ಯೆಯಲ್ಲಿ ‘ಬಿಸ್ಕೆಟ್’ ಮಹತ್ವದ ಪಾತ್ರ ವಹಿಸಿದೆ. ಆತ ವಾಸವಿದ್ದ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಬೀದಿ ನಾಯಿಗಳು ಇದ್ದು, ಅವುಗಳ ಬೊಗಳುವಿಕೆಯಿಂದ ಉಗ್ರ ಎಚ್ಚೆತ್ತುಕೊಂಡು ಪರಾರಿಯಾಗುವ ಸಾಧ್ಯತೆಯಿತ್ತು. ಹೀಗಾಗಿ ಯೋಧರು ಬಿಸ್ಕೆಟ್ ನೀಡಿ ಬೊಗಳುವ ನಾಯಿಗಳ ಬಾಯಿ ಮುಚ್ಚಿಸಿ ಉಗ್ರನನ್ನು ಮುಗಿಸಿದ್ದಾರೆ.
ಇನ್‌ಸ್ಪೆಕ್ಟರ್ ಮನ್ಸೂರ್ ವಾನಿ ಹತ್ಯೆ ಸೇರಿ ಹಲವು ಪ್ರಕರಣಗಳಲ್ಲಿ ಉಗ್ರ ಉಸ್ಮಾನ್ ಭಾಯಿ ಭಾಗಿಯಾಗಿದ್ದ, ಹಲವು ವರ್ಷಗಳಿಂದ ರಾಜ್ಯದಲ್ಲಿ ಸಕ್ರಿಯನಾಗಿದ್ದ ಉಸ್ಮಾನ್ ಶ್ರೀನಗರದ ಜನನಿಬಿಡ ಖಾನ್ಯಾರ್ ಎಂಬಲ್ಲಿ ಅವಿತುಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಶನಿವಾರ ಕಾರ್ಯಾಚರಣೆ ನಡೆಸಿವೆ. ನಾಯಿಗಳು ಬೊಗಳುವುದನ್ನು ತಪ್ಪಿಸಲು ಬಿಸ್ಕೆಟ್ ಬಳಸಿವೆ.
ಇದು ಶ್ರೀನಗರದಲ್ಲಿ 2 ವರ್ಷದಲ್ಲಿ ನಡೆದ ಮೊದಲ ಕಾರ್ಯಾಚರಣೆ ಆಗಿದ್ದು, ಈತನ ಹತ್ಯೆ ನಮಗೆ ಒಂದು ದೊಡ್ಡ ಯಶಸ್ಸು. ಲಷ್ಕರ್‌ನ ಅತಿ ಹಿರಿಯ ಕಮಾಂಡರ್ ಆಗಿದ್ದ ಆತನ ಹತ್ಯೆ ಲಷ್ಕರ್‌ಗೆ ದೊಡ್ಡ ಹೊಡೆತ ನೀಡಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ.