ಪುತ್ತೂರು: ಸಂಟ್ಯಾರ್ ಪಾಣಾಜೆ ಹೆದ್ದಾರಿಯ ಕೈಕಾರ ಎಂಬಲ್ಲಿ ಚಾಲಕನಿಗೆ ನಿದ್ದೆ ಮಂಪರು ಆವರಿಸಿ ಹತೋಟಿ ತಪ್ಪಿದ ಕಾರು ರಸ್ತೆ ಅಂಚಿನಲ್ಲಿದ್ದ 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ.
ಶನಿವಾರ ತಡರಾತ್ತಿ ಈ ಘಟನೆ ನಡೆದಿದ್ದು, ಪ್ರಪಾತಕ್ಕೆ ಕಾರು ಉರುಳಿ ಬಿದ್ದರೂ, ಯಾವುದೇ ಆಪಾಯಗಳಿಲ್ಲದೇ ಚಾಲಕ ಪಾರಾಗಿದ್ದಾನೆ. ಕಾರು ಕಾಸರಗೋಡು ಜಿಲ್ಲೆಯ ಬದಿಯಡ್ಕ ಬಳಿಯ ಡಾ. ಚಂದ್ರಶೇಖರ್ ಅವರ ಪುತ್ರ ಡಾ. ವಿವೇಕ್ ಅವರಿಗೆ ಸೇರಿದಾಗಿದೆ. ರಾತ್ರಿ ಬದಿಯಡ್ಕದಿಂದ ಅವರು ಪುತ್ತೂರಿಗೆ ಕಾರ್ಯ ನಿಮಿತ್ತ ಬರುತ್ತಿದ್ದರು. ಬಳಕ್ಕೆ ಬಳಿ ಬರುತ್ತಿದ್ದಂತೆ ವಿವೇಕ್ ಅವರಿಗೆ ನಿದ್ದೆ ಮಂಪರು ಆವರಿಸಿತ್ತು ಎನ್ನಲಾಗಿದೆ. ನಿಯಂತ್ರಣ ಕಳೆದುಕೊಂಡ ಕಾರು ಎಡ ಬದಿಯ ಪ್ರಪಾತಕ್ಕೆ ಬಿದ್ದಿದೆ. ಕಾರು ಉರುಳಿ ಬಿದ್ದ ಸಂದರ್ಭ ಅಕ್ಕ ಪಕ್ಕದಲ್ಲಿ ವಿದ್ಯುತ್ ಕಂಬ ಹಾಗೂ ಮರಗಳು ಇತ್ತು. ಸುದೈವವಷಾತ್ ಕಾರು ಇವುಗಳ ಮಧ್ಯೆ ಸಾಗಿ ಕಂದಕಕ್ಕೆ ಉರುಳಿದ ಕಾರಣ ಸಂಭಾವ್ಯ ಆಪಾಯ ತಪ್ಪಿದಂತಾಗಿದೆ ಇಂದು ಭಾನುವಾರ ಬೆಳಿಗ್ಗೆ ಕಾರನ್ನು ಕ್ರೇನ್ ಬಳಸಿ ಸ್ಥಳೀಯರ ಸಹಕಾರದಿಂದ ಮೇಲಕ್ಕೆತ್ತಲಾಗಿದೆ.
ಹಿಂದೆ ಈ ಅಪಘಾತ ನಡೆದ ಸ್ಥಳದಿಂದ 50 ಮೀಟರ್ ದೂರದಲ್ಲಿ ಬೆಟ್ಟಂಪಾಡಿ ನಿವಾಸಿ ಮುರಳಿ ಕೃಷ್ಣ ರವರು ಚಲಾಯಿಸುತ್ತಿದ್ದ ಕಾರು, ಇದೆ ರೀತಿ ಕಂದಕಕ್ಕೆ ಉರುಳಿ ಬಿದ್ದಿತ್ತು. ಆ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದರು.