ಕಟೀಲು : ಕಳೆದ ಭಾನುವಾರ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿ ಕಟೀಲು ಸಮೀಪದ ಗಿಡಿಗೆರೆ ನಿವಾಸಿ ತಾರನಾಥ ಮುಗೇರ ಎಂಬವರ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂಬುದು ಪತ್ತೆಯಾಗಿದೆ. ತಾರನಾಥ ಮುಗೇರ ಮೃತದೇಹ ಸಾರ್ವಜನಿಕ ಸ್ಥಳದಲ್ಲಿ ಕುತ್ತಿಗೆಗೆ ಕೇಬಲ್ನಿಂದ ಬಿಗಿದು ಮೃತಪಟ್ಟ ರೀತಿಯಲ್ಲಿ ಸಿಕ್ಕಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸುವ ವೇಳೆ ಸಂಶಯ ದೃಢಪಟ್ಟ ಹಿನ್ನೆಲೆಯಲ್ಲಿ ಗುರುವಾರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮನೆಯಿಂದ ಸುಮಾರು 100 ಮೀ. ದೂರದಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಅಕ್ಟೋಬರ್ 27ರಂದು ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸುತ್ತ ಸಂಶಯ ಇದ್ದ ಕಾರಣ ಸುಳಿವುಗಳ ಜಾಡು ಹಿಡಿದು ತನಿಖೆ ನಡೆಸಿದ ಬಜಪೆ ಪೊಲೀಸರು ಇದು ಕೊಲೆ ಎಂಬುದನ್ನು ಪತ್ತೆಹಚ್ಚಿ ತಾರನಾಥನ ದೊಡ್ಡಪ್ಪನ ಅವಿವಾಹಿತೆ ಮಗಳು ಕಟೀಲು ಗಿಡಿಗೆರೆ ದರ್ಕಾಸುಮನೆ ದೇವಕಿ (42) ಎಂಬಾಕೆಯನ್ನುಬಂಧಿಸಿದ್ದಾರೆ.
ಕುಡಿತದ ಚಟವಿದ್ದ ತಾರನಾಥ ಹಾಗೂ ಆರೋಪಿ ದೇವಕಿ ನಡುವೆ ಪರಸ್ಪರ ಕಿರುಕುಳದ ಮಾತುಗಳು ತನಿಖೆಯ ವೇಳೆ ಕೇಳಿಬಂದಿದ್ದು ನಿಗೂಢವೆನಿಸಿದೆ. ಹೆದರಿಸುವ ಸಲುವಾಗಿ ತಾರನಾಥ ತನ್ನ ಮನೆಯ ಪಕ್ಕವೇ ಇರುವ ದೊಡ್ಡಪ್ಪನ ಮನೆಯ ಬಟ್ಟೆ ಒಣಗಿಸಲು ಕಟ್ಟಿದ್ದ ಕೇಬಲನ್ನು ತಂದು ಕುತ್ತಿಗೆಗೆ ಬಿಗಿದುಕೊಂಡಿದ್ದ ವೇಳೆ ದೇವಕಿ ಅದನ್ನು ಜೋರಾಗಿ ಬಿಗಿದಾಗ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಘಟನೆ ನಡೆದಿದ್ದು ಶನಿವಾರ ರಾತ್ರಿ 7 ಗಂಟೆಯ ಬಳಿಕ. ಸ್ಥಳದಲ್ಲಿ ಜೋಡಿಸಿ ಇಟ್ಟಿದ್ದ ಚಪ್ಪಲಿ, ಸ್ಥಳ ಮಹಜರು ವೇಳೆ ಧೃಡಪಟ್ಟ ಅಂಶಗಳಿಂದ ಪ್ರಕರಣದ ಸುಳಿವು ಸಿಕ್ಕಿತ್ತು ಎನ್ನಲಾಗಿದೆ. ಪ್ರಕರಣದಲ್ಲಿ ತಾರನಾಥನ ಸಹೋದರನನ್ನು ಕೂಡಾ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.