ಡಿಜಿಟಲ್ ಅರೆಸ್ಟ್ ಮೂಲಕ ನಡೆಯುತ್ತಿದೆ ಆನ್‌ಲೈನ್ ದರೋಡೆ
ಹೊಸದಿಲ್ಲಿ : ಸೈಬರ್ ಚೋರರು ಕಳೆದ ಹತ್ತು ತಿಂಗಳಲ್ಲಿ ದೋಚಿದ ಮೊತ್ತ ಬರೋಬ್ಬರಿ 2,140 ಕೋ. ರೂ. ಕೇಂದ್ರ ಗೃಹ ಸಚಿವಾಲಯದ ಸೈಬರ್ ವಿಭಾಗ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಆನ್‌ಲೈನ್ ವಂಚನೆ ಮತ್ತು ಸೈಬರ್ ಅರೆಸ್ಟ್‌ನಂತಹ ತಂತ್ರಗಳಿಂದ ಸೈಬರ್ ಚೋರರು ಈ ವರ್ಷದ ಹತ್ತು ತಿಂಗಳಲ್ಲೇ 2,140 ಕೋ. ರೂ. ಲಪಟಾಯಿಸಿದ್ದಾರೆ ಎಂದು ಸೈಬರ್ ವಿಭಾಗ ಮಾಹಿತಿ ನೀಡಿದೆ.
ಪ್ರತಿ ತಿಂಗಳು ಸರಾಸರಿ 214 ಕೋ.ರೂ.ಯಂತೆ ದೇಶದ ಜನರು ಸೈಬರ್ ವಂಚಕರ ಮೋಸಕ್ಕೆ ಬಲಿಯಾಗಿ ಕಳೆದುಕೊಂಡಿದ್ದಾರೆ. ಸಿಬಿಐ, ಇ.ಡಿ. ಪೊಲೀಸ್, ಆರ್‌ಬಿಐ, ಕಸ್ಟಮ್ಸ್ ಅಧಿಕಾರಿಗಳೆಂದು ಹೆದರಿಸಿ ಜನರನ್ನು ಡಿಜಿಟಲ್ ಕಾಲ್ ಮಾಡಿ ದೋಚುವ ತಂತ್ರ ಕಳೆದ ಸಮಯದಿಂದ ನಡೆಯುತ್ತಿದೆ. ಅನೇಕ ವಿದ್ಯಾವಂತರೇ ಇವರಿಗೆ ಬಲಿಪಶುಗಳಾಗಿ ಹಣ ಕಳೆದುಕೊಂಡಿದ್ದಾರೆ.
ಕಾಂಬೋಡಿಯ, ಮ್ಯಾನ್ಮಾರ್, ವಿಯೆಟ್ನಾಂ, ಲಾವೋಸ್, ಥಾಯ್‌ಲ್ಯಾಂಡ್ ದೇಶಗಳ ಅನೇಕ ಕಾಲ್‌ಸೆಂಟರ್‌ಗಳು ಡಿಜಿಟಲ್ ಅರೆಸ್ಟ್ ಹಗರಣದ ಜೊತೆಗೆ ತಳುಕು ಹಾಕಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕಾಂಬೋಡಿಯದ ಚೈನದವರ ಮಾಲಕತ್ವದ ಕ್ಯಾಸಿನೊಗಳಲ್ಲಿರುವ ಕಾಲ್‌ಸೆಂಟರ್‌ಗಳಿಂದ ಕರೆಗಳು ಬಂದಿರುವುದು ಪತ್ತೆಯಾಗಿದೆ ಎಂದು ಕೆಂದ್ರ ಗೃಹ ಸಚಿವಾಲಯದ ವರದಿ ತಿಳಿಸಿದೆ.
1930 -ಎಮರ್ಜೆನ್ಸಿ ಹೆಲ್ಪ್‌ಲೈನ್
ಹತ್ತು ತಿಂಗಳಲ್ಲಿ 92,334 ಡಿಜಿಟಲ್ ಅರೆಸ್ಟ್ ಪ್ರಕರಣಗಳು ಸಂಭವಿಸಿವೆ. ಜನರನ್ನು ತನಿಖಾ ಸಂಸ್ಥೆಗಳ ಹೆದರಿಸಿ ಹಣ ಸುಲಿಯಲಾಗಿದೆ. ಇಂತಹ ಕರೆಗಳು ಬಂದಾಗ 1930 ನಂಬರ್‌ಗೆ ಕರೆಮಾಡುವ ಮೂಲಕ ನೇರವಾಗಿ ಭದ್ರತಾ ಏಜೆನ್ಸಿಗಳನ್ನು ಸಂಪರ್ಕಿಸಬಹುದು. ತಕ್ಷಣವೇ ತಿಳಿಸಿದರೆ ಚೋರರು ಸಿಕ್ಕಿಬೀಳುವ ಸಾಧ್ಯತೆಯಿದೆ.