ಒಂದು ವರ್ಷದ ಹಿಂದೆ ಪಹಣಿ ತಿದ್ದುಪಡಿ ಮಾಡಿರುವ ಅನುಮಾನ
ಮಂಡ್ಯ : ವಕ್ಫ್ ನೋಟಿಸ್‌ಗಳಿಂದ ರೈತರು ಮತ್ತು ಮಠಗಳು ಕಂಗಾಲಾಗಿರುವ ಹೊತ್ತಲ್ಲೇ ಪುರಾತನ ದೇವಸ್ಥಾನದ ಆಸ್ತಿಯನ್ನೂ ವಕ್ಫ್ ಮಂಡಳಿಗೆ ಸೇರಿಸಿರುವುದು ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಪುರಾತನ ಶ್ರೀ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನದ ಪಹಣಿಯಲ್ಲಿಯೂ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ತಿಳಿದುಬಂದಿದೆ. ಇದು ಗ್ರಾಮಸ್ಥರನ್ನು ಕೆರಳಿಸಿದೆ.
ರಾಜ್ಯದಾದ್ಯಂತ ವಕ್ಫ್ ವಿಚಾರದ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ದೇಗುಲದ ಆಸ್ತಿ ದಾಖಲೆ ನೋಡಿದ ಗ್ರಾಮಸ್ಥರಿಗೆ ಶಾಕ್ ಆಗಿದೆ. ಇದರಿಂದಾಗಿ ಅವರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.
ಕಳೆದ ಹಲವು ವರ್ಷಗಳಿಂದ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನದ ಹೆಸರು ಪಹಣಿಯಲ್ಲಿ ಬರುತ್ತಿತ್ತು. ತಲೆತಲಾಂತರದಿಂದ ಚಿಕ್ಕಮ್ಮ ಚಿಕ್ಕದೇವಿಗೆ ಗ್ರಾಮದ ಜನರಿಂದ ಪೂಜಾ ಕೈಂಕರ್ಯ ನೆರವೇರುತ್ತಿದೆ. ಭೂ ದಾಖಲೆ ಕೂಡ ಚಿಕ್ಕಮ್ಮ ಚಿಕ್ಕದೇವಿ ಹೆಸರಲ್ಲಿಯೇ ಇತ್ತು. ಆದರೆ ಒಂದು ವರ್ಷದ ಹಿಂದೆ ದಿಢೀರಾಗಿ ‘ವಕ್ಫ್ ಆಸ್ತಿ’ ಎಂದು ನಮೂದಿಸಲಾಗಿದೆ. ಸರ್ವೆ ನಂಬರ್ 74 ರಲ್ಲಿರುವ ದೇಗುಲ ಹಾಗೂ ದೇಗುಲಕ್ಕೆ ಸೇರಿ 6 ಗುಂಟೆ ಜಾಗ ವಕ್ಫ್ ಆಸ್ತಿ ಎಂದು ನಮೂದಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
ವಕ್ಫ್ ಒಡೆತನದಲ್ಲಿ ದೇಗುಲವಿದೆ ಎಂಬ ಆರ್‌ಟಿಸಿ ಹಾಗೂ ಭೂ ದಾಖಲೆ ನೋಡಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಉಪವಿಭಾಗಧಿಕಾರಿ ಸೂಚನೆ ಮೇರೆಗೆ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದು ಆರೋಪಿಸಿರುವ ಅವರು ನಮ್ಮೂರಲ್ಲಿ ಮುಸ್ಲಿಂ ಪ್ರಾಬಲ್ಯವೂ ಇಲ್ಲ. ದೇವಾಲಯದ ಹೆಸರಲ್ಲಿದ್ದ ಆಸ್ತಿಯನ್ನು ವಕ್ಫ್ಗೆ ಸೇರಿಸುವಂತೆ ಗ್ರಾಮಸ್ಥರು ಪತ್ರ ಬರೆದಿಲ್ಲ. ಆದರೆ ಅದ್ಹೇಗೆ ಗ್ರಾಮಸ್ಥರ ಗಮನಕ್ಕೂ ಬಾರದೇ ವಕ್ಫ್ ಆಸ್ತಿ ಎಂದು ದಾಖಲಾಗಿದೆ? ಇದರ ಹಿಂದೆ ಹಲವು ಅನುಮಾನ ಮೂಡುತ್ತಿದೆ ಎಂದಿದ್ದಾರೆ.
ದೇಗುಲವಲ್ಲದೆ ರೈತರ ಜಮೀನ ಮೇಲೂ ದಾಖಲೆ ತಿದ್ದಿರುವ ಶಂಕೆ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು, ಕೂಡಲೇ ದೇಗುಲ ಹಾಗೂ ದೇಗುಲದ ಜಾಗ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿರುವುದನ್ನು ತಿದ್ದುಪಡಿ ಮಾಡಬೇಕು, ದೇಗುಲದ ಆಸ್ತಿಯೆಂದು ನಮೂದಾಗಬೇಕು ಎಂದು ಆಗ್ರಹಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ, ಜಿಲ್ಲಾಡಳಿತದ ವಿರುದ್ಧ ಹೋರಾಟಕ್ಕಿಳಿಯುವ ಎಚ್ಚರಿಕೆ ನೀಡಿದ್ದಾರೆ.