ವಕ್ಫ್‌ ಕೋಲಾಹಲ : ನ.4ರಂದು ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ

ವಕ್ಫ್‌ ಸಚಿವ ಜಮೀರ್‌ ಅಹ್ಮದ್‌ ಕಿತ್ತೊಗೆಯಲು ಆಗ್ರಹ

ಬೆಂಗಳೂರು: ವಕ್ಫ್ ಮಂಡಳಿ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಲು ಹುನ್ನಾರ ನಡೆಸಿರುವುದನ್ನು ಪ್ರತಿಭಟಿಸಿ ಮತ್ತು ವಕ್ಫ್‌ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ನ.4ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.

ಪ್ರತಿಭಟನೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಸಂಸದರು, ಶಾಸಕರು, ಪರಿಷತ್ ಸದಸ್ಯರು, ಮಾಜಿ ಲೋಕಸಭಾ ಸದಸ್ಯರು, ಪಕ್ಷದ ಪದಾಧಿಕಾರಿಗಳು ಪತ್ರ ಬರೆದಿದ್ದು, ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಯಲ್ಲಿ ಎಲ್ಲರೂ ಪಕ್ಷಭೇದ ಮರೆತು ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಪ್ರತಿಭಟನೆಯಲ್ಲಿ ಸಂಸದರು, ಶಾಸಕರು, ಪರಿಷತ್ ಸದಸ್ಯರು, ಮಾಜಿ ಲೋಕಸಭಾ ಸದಸ್ಯರು, ಪಕ್ಷದ ಪದಾಧಿಕಾರಿಗಳು ಪಾಲ್ಗೊಳ್ಳಬೇಕು. ರಾಜ್ಯ ಸರಕಾರ ತುಘಲಕ್ ನೀತಿಯನ್ನು ಜಾರಿಗೆ ತರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಸಚಿವ ಜಮೀರ್‌ ಅಹಮದ್‍ರನ್ನು ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ರೈತರ ಪರವಾಗಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ, ತಹಶೀಲ್ದಾರ್ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು. ಅಮಾಯಕ ರೈತರ ಪಹಣಿ ಪತ್ರಗಳಲ್ಲಿ ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ ಎಂದು ನಮೂದಿಸುವುದರ ಮೂಲಕ ರೈತರ ಜಮೀನನ್ನು ಕಬಳಿಸುವ ಹುನ್ನಾರ ನಡೆದಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.









































 
 

ಈಗಾಗಲೇ ಸಾವಿರಾರು ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ ಎಂದು ನಮೂದಿಸಿದ್ದರಿಂದ ಕಲಬುರ್ಗಿ, ವಿಜಯಪುರ, ಯಾದಗಿರಿ, ಬೀದರ್, ಶಿವಮೊಗ್ಗ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ರೈತರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಚನಾತ್ಮಕ ಪ್ರತಿಪಕ್ಷವಾಗಿ ನಾವುಗಳು ರೈತರ ಪರವಾಗಿ ನಿಂತು ಸರಕಾರವನ್ನು ಎಚ್ಚರಿಸುವ ಹೋರಾಟಕ್ಕೆ ಇಳಿಯಬೇಕು ಎಂದು ಹೇಳಿದ್ದಾರೆ.

ಇಸ್ಲಾಮೀಕರಣ ಯತ್ನ – ಜೋಶಿ ವಾಗ್ದಾಳಿ

ಸಚಿವ ಜಮೀರ್‌ ಅಹ್ಮದ್‌ ಕೋಮು ದ್ವೇಷ ಹರಡಿ ರಾಜ್ಯವನ್ನು ಇಸ್ಲಾಮೀಕರಣ ಮಾಡಲು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ. ವಕ್ಫ್ ಆಸ್ತಿ ಕಬಳಿಕೆಯಲ್ಲಿ ಜಮೀರ್ ಅಹಮದ್ ಶಾಮೀಲಾಗಿದ್ದಾರೆ. ಕಾಂಗ್ರೆಸ್‌ಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಜಮೀರ್ ಅಹ್ಮದ್ ರಾಜ್ಯ ಮತ್ತು ದೇಶವನ್ನು ಇಸ್ಲಾಮೀಕರಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಕೋಮು ದ್ವೇಷವನ್ನು ಹರಡುತ್ತಿದ್ದಾರೆ. ಧರ್ಮಾಂಧತೆಯಲ್ಲಿ ಮುಳುಗಿರುವ ಜಮೀರ್ ಅಹಮದ್ ಅವರನ್ನು ಮೊದಲು ಕಾಂಗ್ರೆಸ್ ತೊಲಗಿಸಬೇಕು ಎಂದು ಜೋಶಿ ಒತ್ತಾಯಿಸಿದ್ದಾರೆ.

ಇಲ್ಲಿನ ಮುಸ್ಲಿಮರು ನಿಜವಾದವರಲ್ಲ. ಇಲ್ಲಿದ್ದವರೆಲ್ಲ ಹಿಂದೂಗಳು. ಅವರು ಬೆದರಿಕೆ ಮತ್ತು ಆಮಿಷಗಳಿಗೆ ಬಲಿಯಾದವರು. ಹೀಗಿರುವಾಗ ವಕ್ಫ್ ಲಕ್ಷಾಂತರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಹೇಗೆ? ವಕ್ಫ್‌ಗೆ ಯಾರೂ ಲಕ್ಷಾಂತರ ಎಕರೆ ಭೂಮಿ ದಾನ ಮಾಡಿಲ್ಲ, ವಕ್ಫ್ ಇಷ್ಟು ಆಸ್ತಿಯನ್ನು ಹೇಗೆ ಸಂಪಾದಿಸುತ್ತದೆ? ಅವರು ದೇಣಿಗೆ ಎಂದು ಸರಳವಾಗಿ ಹೇಳಿಕೊಳ್ಳುತ್ತಾರೆ. ಯಾರಾದರೂ ಲಕ್ಷಾಂತರ ಎಕರೆಗಳನ್ನು ದಾನ ಮಾಡುತ್ತಾರೆಯೇ? ಅಂತಹ ದೇಣಿಗೆಗಳನ್ನು ಯಾರು ನೀಡಿದ್ದಾರೆ? ವಕ್ಫ್ ಮೂಲಕ ರೈತರಿಗೆ ನೋಟಿಸ್ ನೀಡುವುದನ್ನು ಕಾನೂನುಬದ್ಧ ಅಥವಾ ನ್ಯಾಯಸಮ್ಮತವೆಂದು ಪರಿಗಣಿಸಲಾಗುವುದಿಲ್ಲ. ರೈತರ ಭೂಮಿಯನ್ನು ಕಸಿದುಕೊಳ್ಳಲು ಅವರು ಯಾರು ಎಂದು ಜೋಶಿ ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top