ಕಡಬ: ತಾಲೂಕಿನ ಕಾಣಿಯೂರು ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 12ನೇ ವರ್ಷದ ಆಯ್ದ ಸ್ಥಳೀಯ ಆಟಗಾರರ ನಿಗದಿತ 12 ತಂಡಗಳ ‘ಪ್ರೊ ವಾಲಿಬಾಲ್ ಪಂದ್ಯಾಟ’, ಸ್ಥಳೀಯರಿಗೆ ಆಟೋಟ ಸ್ಪರ್ಧೆ, ಸನ್ಮಾನ, ಪ್ರತಿಭಾ ಪುರಸ್ಕಾರ, ಆಶಕ್ತ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ ಅ.31 ಗುರುವಾರ ಪುಣ್ಚತ್ತಾರಿನಲ್ಲಿ ನಡೆಯಲಿದೆ ಎಂದು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಸದಸ್ಯ ದಿನೇಶ್ ಮಾಳ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕ್ಲಬ್ ಕಳೆದ 11 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಜತೆಗೆ ದೀಪಾವಳಿ ಪ್ರಯುಕ್ತ ವಾಲಿಬಾಲ್ ಪಂದ್ಯಾಟ, ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳಾದ ಹಗ್ಗಜಗ್ಗಾಟ, ಗುಂಡು ಎಸೆತ, ಸಂಗೀತ ಕುರ್ಚಿ ಮುಂತಾದ ಪಂದ್ಯಾಟವನ್ನು ಅಚ್ಚುಕಟ್ಟಾಗಿ ನೆವೇರಿಸುತ್ತಾ ಬಂದಿದೆ ಎಂದು ತಿಳಿಸಿದರು.
ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭವನ್ನು ಬೆಳ್ಳಾರೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಈರಯ್ಯ ಡಿ.ಎನ್. ಉದ್ಘಾಟಿಸಲಿದ್ದು, ಪುಣ್ಚತ್ತಾರು ಶ್ರೀಹರಿ ಭಜನಾ ಮಂಡಳಿ ಗೌರವಾಧ್ಯಕ್ಷ ಐ.ನಾರಾಯಣ ಗೌಡ ಇಡ್ಯಡ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಂಗಳೂರು ಜೆಎಂಎಫ್ ಸಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಬಿ., ಕರಿಮಜಲು ಪೈಕ ಗ್ರಾಮ ದೈವಸ್ಥಾನದ ಪುಟ್ಟಣ್ಣ ಗೌಡ ಪೈಕ, ಪುಣ್ಚತ್ತಾರು ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಡಾ.ದೇವಿಪ್ರಸಾದ್ ಕಾನತ್ತೂರು, ಪುಣ್ಚತ್ತಾರು ಶ್ರೀಹರಿ ಭಜನಾ ಮಂಡಳಿ ಅಧ್ಯಕ್ಷ ಮಧುಕರ ಬೇಂಗಡ್ಕ, ಕಾಣಿಯೂರು ಮಠದ ಮ್ಯಾನೇಜರ್ ಶ್ರೀನಿಧಿ ಆಚಾರ್ಯ, ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಹರ್ಷಿತ್ ನಿಡ್ಡಾಜೆ, ಶ್ರೀ ದುರ್ಗಾಪರಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಶಾಂತ್ ಆದಿಮುರುಳ್ಯ, ಪುಣ್ಚತ್ತಾರು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಮಾಳ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭ ಸಂಜೆ 7 ಗಂಟೆಗೆ ನಡೆಯಲಿದ್ದು, ಅಧ್ಯಕ್ಷತೆಯನ್ನು ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ ವಹಿಸಲಿದ್ದು, ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಉದ್ಘಾಟಿಸುವರು ಮುಖ್ಯ ಅತಿಥಿಗಳಾಗಿ ಪುತ್ತೂರು ಉಪವಿಭಾಗದ ಡಿಎಸ್ ಪಿ ಅರುಣ್ ನಾಗೇಗೌಡ ಸಹಿತ ಮತ್ತಿತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಸ್ಥಾಪಕ ಅಧ್ಯಕ್ಷ ರಾಧಾಕೃಷ್ಣ ಪೈಕ, ಅಧ್ಯಕ್ಷ ಹರೀಶ್ ಪೈಕ, ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಅಶ್ವಿನ್ ಕರಿಮಜಲು ಉಪಸ್ಥಿತರಿದ್ದರು.