ಬೆಂಗಳೂರು: ಕರ್ನಾಟಕದಲ್ಲಿ ಈಗ ಹಗರಣ ಮತ್ತು ಕಬಳಿಕೆಯದ್ದೇ ಸುದ್ದಿ. ನಿತ್ಯ ಬೆಳಗಾದರೆ ಒಂದಿಲ್ಲೊಂದು ಹಗರಣ ಅಥವಾ ಭೂ ಕಬಳಿಕೆ ಪ್ರಕರಣಗಳು ಬಯಲಾಗುತ್ತಿವೆ. ಈಗ ಮಾಜಿ ಸ್ಪೀಕರ್ ಚೊನಗರೆಸಸ ಹಿರಿಯ ನಾಯಕ ರಮೇಶ್ ಕುಮಾರ್ ಸರದಿ. ರಮೇಶ್ ಕುಮಾರ್ ವಿರುದ್ಧ 64 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ ಕೇಳಿಬಂದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹೊಸಹುಡ್ಯದ ಸರ್ವೆ ನಂ.1, 2ರಲ್ಲಿ 122 ಎಕರೆ ಭೂಮಿಯನ್ನು ಏಳು ಜನ ಒತ್ತುವರಿಮಾಡಿಕೊಂಡಿದ್ದು, ಅವರಲ್ಲಿ ರಮೇಶ್ ಕುಮಾರ್ ಸಹ ಒಬ್ಬರಾಗಿದ್ದಾರೆ. ಈ ಹಿಂದೆ ದಿವಂಗತ ಡಿ.ಕೆ.ರವಿ ಜಿಲ್ಲಾಧಿಕಾರಿ ಆಗಿದ್ದಾಗ ಜಂಟಿ ಸರ್ವೆ ಮಾಡಲಾಗಿತ್ತು. ಹಲವು ಗೊಂದಲಗಳಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಮರು ಸರ್ವೆ ಮಾಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಸರ್ವೆ ವೇಳೆ ಸ್ಥಳದಲ್ಲಿ ಹಾಜರಿರುವಂತೆ ರಮೇಶ್ ಕುಮಾರ್ಗೆ ಪತ್ರ ಬರೆಯಲಾಗಿದೆ.
ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ಅರಣ್ಯ ವಲಯದ ಜಿನಗಲಕುಂಟೆ ಗ್ರಾಮದಲ್ಲಿ 64 ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ. ಸಮೀಕ್ಷೆ ಸಂಖ್ಯೆಯ ಅಡಿಯಲ್ಲಿ ಭೂಮಿಯ ಮೇಲೆ ಜಂಟಿ ಸಮೀಕ್ಷೆಯನ್ನು ನಡೆಸಬೇಕು. ಒತ್ತುವರಿ ಕಂಡುಬಂದಲ್ಲಿ, ಅದನ್ನು ತೆರವುಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶಿಸಲಾಗಿತ್ತು. ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ಶಿವಶಂಕರ್ ಸೆಂಗುಟ್ಟಿವೇಲ್ ಇತ್ತೀಚೆಗೆ ಒತ್ತುವರಿ ಕುರಿತು ಪತ್ರ ಬರೆದಿದ್ದು, ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೋಲಾರದ ಜಿನಗಲಕುಂಟೆ ಅರಣ್ಯ ವಲಯದಲ್ಲಿ 122 ಎಕರಿ ಅರಣ್ಯ ಒತ್ತುವರಿ ಆಗಿದೆ ಎಂಬ ಬಗ್ಗೆ ಗೊಂದಲಗಳಿದ್ದ ಕಾರಣ ಯಾವುದೇ ಕ್ರಮವಾಗಿಲ್ಲ. ಆದರೆ ಅದರಲ್ಲಿ 2013ರಲ್ಲಿ ಹೈಕೋರ್ಟ್ ಜಂಟಿ ಸರ್ವೆ ಶೀಘ್ರ ಮುಗಿಸಬೇಕು. ಒತ್ತುವರಿ ಮಾಡಿರುವುದು ದೃಢವಾದರೆ ಕ್ರಮಕೈಗೊಳ್ಳುವಂತೆ ಆದೇಶಿಸಿತ್ತು.