ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ – ಮಾನಸೋಲ್ಲಾಸ-2024 | ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಕುಂಠಿತವಾಗುತ್ತಿದೆ : ಜಯಸೂರ್ಯ ರೈ

ಪುತ್ತೂರು: ಈಚೆಗಿನ ವರ್ಷಗಳಲ್ಲಿ ವಿದ್ಯಾರ್ಥಿಗಳಲ್ಲಿನ ದೈಹಿಕ ಸಾಮರ್ಥ್ಯ ಕುಂಠಿತವಾಗುತ್ತಿದೆ. ಕೆಲಹೊತ್ತು ಬಯಲಿನಲ್ಲಿ ನಿಂತರೆ ತಲೆತಿರುಗಿ ಕುಸಿಯುವ ವಿದ್ಯಾರ್ಥಿಗಳನ್ನು ಕಾಣುತ್ತಿದ್ದೇವೆ. ಮನೆಗಳಲ್ಲಿ ಮಕ್ಕಳಿಂದ ದೈಹಿಕ ಕೆಲಸ ಮಾಡಿಸದಿರುವುದು, ನಡೆದುಹೋಗಬಹುದಾದ ಜಾಗದಲ್ಲೂ ವಾಹನಗಳಲ್ಲೇ ಸಂಚರಿಸುವುದು ದೇಹಶಕ್ತಿಯ ಕ್ಷೀಣತೆಗೆ ಕಾರಣವಾಗುತ್ತಿದೆ. ಆದ್ದರಿಂದ ನಮ್ಮ ದೇಹಕ್ಕೆ ಶ್ರಮದಾಯಕ ಕಾರ್ಯಗಳಿಗೆ ಒಗ್ಗಿಕೊಳ್ಳುವ ಕಲೆಯನ್ನು ಕಲಿಸಿಕೊಡಬೇಕಿದೆ ಎಂದು ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಹೇಳಿದರು.

ಅವರು ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ – ‘ಮಾನಸೋಲ್ಲಾಸ-2024’ ವನ್ನು ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ನಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಉದ್ಯೋಗವನ್ನು ದ್ವೇಷಿಸುತ್ತಾರೆ. ಕೃಷಿಕರು ಕೃಷಿಯ ಬಗೆಗೆ, ವೈದ್ಯರು ವೈದ್ಯವೃತ್ತಿಯ ಬಗೆಗೆ, ಇಂಜಿನಿಯರ್‌ಗಳು ಇಂಜಿನಿಯರಿಂಗ್ ಬಗೆಗೆ… ಹೀಗೆ ಎಲ್ಲರೂ ತಮ್ಮ ವೃತ್ತಿಯ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಯಾಕೆ ತಮ್ಮ ವೃತ್ತಿ ಸರಿ ಇಲ್ಲ, ಯಾಕೆ ಅದು ಬೇಡ ಎಂಬುದಕ್ಕೆ ಯಾರಲ್ಲೂ ಉತ್ತರವಿಲ್ಲ. ಹಾಗಾಗಿ ಮನಃಸ್ಥಿತಿಯ ಬದಲಾವಣೆ ಆಗಬೇಕಿದೆ. ದೇಹವನ್ನು ನಮ್ಮ ಹಿಡಿತದಲ್ಲಿಟ್ಟುಕೊಂಡು ಬದುಕುವ ಕ್ರಮವನ್ನು ಜಾರಿಗೊಳಿಸಬೇಕಾಗಿದೆ ಎಂದು ಹೇಳಿದರು.









































 
 

ಅತಿಥಿಯಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ರಕ್ಷಣಾ ಸಚಿವಾಲಯದ ಉದ್ಯೋಗಿ ಶಿವರಾಜ್ ಎಂ. ಮಾತನಾಡಿ, ದೇಶ ನಮಗೇನು ಕೊಟ್ಟಿದೆ ಎಂಬುದನ್ನು ಯೋಚಿಸದೆ ನಾವು ದೇಶಕ್ಕೇನು ಕೊಟ್ಟಿದ್ದೇವೆ ಎಂಬ ನೆಲೆಯಲ್ಲಿ ಚಿಂತನೆಗಳು ಮೂಡಿಬರಬೇಕು. ನಮ್ಮ ಬದುಕೇ ಒಂದು ಹೋರಾಟ. ಓದುವ ಹುಚ್ಚನ್ನು ಹಚ್ಚಿಸಿಕೊಂಡರೆ ಬದುಕಿನಲ್ಲಿ ಏನು ಬೇಕಾದರೂ ಸಾಧಿಸಬಹುದು. ನಮ್ಮನ್ನು ಹಾದಿತಪ್ಪಿಸುವ ವಿಷಯಗಳಿಂದ ನಾವು ದೂರ ಇದ್ದಾಗ ಸಾಧ್ಯತೆಗಳು ಅನಾವರಣಗೊಳ್ಳುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ನಮ್ಮ ದೇಶದಲ್ಲಿ ಹಿಂದೂಗಳಿಗೆ ಧರ್ಮ ಶಿಕ್ಷಣದ ಅಗತ್ಯ ಇದೆ. ಇದುವರೆಗೆ ಧಾರ್ಮಿಕ ಶಿಕ್ಷಣವನ್ನು ಒದಗಿಸಿಕೊಡದಿದ್ದುದರ ಪರಿಣಾಮಗಳನ್ನು ನಾವಿಂದು ಅನುಭವಿಸುತ್ತಿದ್ದೇವೆ. ಭಗವದ್ಗೀತೆಯ ವಿಚಾರಗಳನ್ನು ತಿಳಿದವರು ನ್ಯಾಯಾಲಯಗಳಲ್ಲಿ ಭಗವದ್ಗೀತೆ ಮುಟ್ಟಿ ಪ್ರಮಾಣ ಮಾಡುವ ಸಂದರ್ಭವೇ ಸೃಷ್ಟಿಯಾಗುವುದಿಲ್ಲ. ಧರ್ಮಜ್ಞಾನವಿಲ್ಲದೆ ರೋಬೋಟ್‌ಗಳಂತೆ ಬದುಕುತ್ತಿದ್ದೇವೆ. ಈ ವಾತಾವರಣವನ್ನು ಮೀರಿ ಧರ್ಮಜ್ಞಾನಿಗಳಾಗಿ ಜೀವನ ಸಾಗಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್.ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಸುರೇಶ ಶೆಟ್ಟಿ, ಡಾ.ಎಚ್.ಮಾಧವ ಭಟ್, ಪ್ರಸನ್ನ ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಿವರಾಮ ಆಳ್ವಾ, ವಿದ್ಯಾರ್ಥಿ ನಾಯಕರಾದ ಪವನ್ ಭಾರದ್ವಾಜ್, ಬಿ.ಬಿ.ರಿತ್ವಿಕ್ ಗೌಡ, ಸಂಜಯ್ ಎನ್ ಹಾಗೂ ತನ್ಮಯ್ ಟಿ.ಎಂ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾಭಾರತಿ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದಧನ್ವಿತ್, ಅನಿಕೇತ್ ಎನ್, ಶ್ರದ್ಧಾಲಕ್ಷ್ಮೀ, ಪ್ರತೀಕ್ಷ ಎನ್ ಶೆಣೈ ಹಾಗೂ ಪ್ರತೀಕ್ಷಾ ಆಳ್ವಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಹಂತಗಳಲ್ಲಿ ಬಹುಮಾನ ವಿಜೇತರಾದವರನ್ನು ಮತ್ತು ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಅಭಿನಂದಿಸಲಾಯಿತು. ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು.

ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ಸ್ವಾಗತಿಸಿ, ವರದಿ ಮಂಡಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದಿಸಿದರು.  ವಿದ್ಯಾರ್ಥಿನಿಯರಾದ ರಿಶಾಲಿ, ವೃದ್ಧಿ ಎ. ಕಾರ್ಯಕ್ರಮ ನಿರ್ವಹಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪಪ್ರಾಚಾರ್ಯೆ ಶೈನಿ ಹಾಗೂ ಉಪನ್ಯಾಸಕ ಪ್ರದೀಪ್ ಕೆ.ವೈ ದತ್ತಿನಿಧಿ ಬಹುಮಾನದ ವಿವಿರಗಳನ್ನು ವಾಚಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top