ಪುತ್ತೂರು: ಪುತ್ತೂರಿನಲ್ಲಿ ಸುಸಜ್ಜಿತ ಕ್ರೀಡಾಂಗಣಕ್ಕಾಗಿ 20 ಎಕ್ರೆ ಜಾಗ ಗುರುತಿಸಲಾಗಿದ್ದು, ಜತೆಗೆ 8 ಕೋಟಿ ಅನುದಾನ ಬಿಡುಗಡೆಯಾಗಿದೆ. ಕ್ರೀಡಾಂಗಣ ನಿರ್ಮಾಣಕ್ಕಾಗಿ ಸಂಬಂಧ ಪಟ್ಟ ಇಲಾಖೆಯಲ್ಲಿ ಕಡತದ ಕೆಲಸ ಕಾರ್ಯಗಳು ಪ್ರೊಸೆಸ್ ಹಂತದಲ್ಲಿದೆ ಎಂದು ಶಾಸಕ ಅಶೋಕ್ ಕುಮಾರ್ ಹೇಳಿದರು.
ಅವರು ಸೋಮವಾರ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ 2024-25ನೇ ಸಾಲಿನ ಪುತ್ತೂರು ಶೈಕ್ಷಣಿಕ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಂಗಣದಲ್ಲಿ ಒಳಾಂಗಣ ಸಹಿತ ಮಕ್ಕಳಿಗೆ ಎಲ್ಲಾ ರೀತಿಯ ಕ್ರೀಡಾ ವ್ಯವಸ್ಥೆ ಸಿಗಬೇಕು ಎಂಬ ನಿಟ್ಟಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವುದು ನನ್ನ ಕನಸಾಗಿದೆ. ಕ್ರೀಡಾಪಟುಗಳಿಗೆ ಉತ್ತಮ ಪೋಷಕಾಂಶದ ಆಹಾರದ ಕೊರತೆಯಿದ್ದು, ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಪ್ರೊಟಿನ್ ಯುಕ್ತ ಆಹಾರ ನೀಡುವ ಜತೆಗೆ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವಂತೆ ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದ ಅವರು, ಕ್ರೀಡಾ ಆಯೋಜನೆ ಅಷ್ಟು ಸುಲಭವಲ್ಲ. ಸರಕಾರದಿಂದ ಅನುದಾನವೂ ಬರುವುದಿಲ್ಲ. ಮಕ್ಕಳಲ್ಲಿರುವ ಆಸಕ್ತಿ ಪ್ರದರ್ಶನ ನೀಡುವಲ್ಲಿ ತಾಲೂಕು ಮಟ್ಟದ ಕ್ರೀಡಾ ಕೂಟವನ್ನು ಸಾಂದೀಪನಿ ಸಂಸ್ಥೆ ಆಯೋಜಿಸಿರುವುದು ಶ್ಲಾಘನೀಯ ಎಂದರು.
ನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಆಂಜನೇಯ ರೆಡ್ಡಿ ಕ್ರೀಡಾ ಸಂಕೇತವಾಗಿ ಪಾರಿವಾಳ ಹಾರಿಸಿ ಶುಭ ಹಾರೈಸಿದರು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಕ್ರೀಡಾಜ್ಯೋತಿ ಬೆಳಗಿದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಸಾಂದೀಪನಿ ಶಾಲಾ ಸ್ಥಾಪಕಾಧ್ಯಕ್ಷ ಜಯರಾಮ ಕೆದಿಲಾಯ, ಸಂಚಾಲಕ ಭಾಸ್ಕರ ಆಚಾರ್ ಹಿಂದಾರು,
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಆಡಳಿತ ಸಮಿತಿ ಸದಸ್ಯರಾದ ಪ್ರಸನ್ನ ಎನ್. ಭಟ್, ಹರೀಶ್ ಪುತ್ತೂರಾಯ ಉಪಸ್ಥಿತರಿದ್ದರು.
ಸವಣೂರು ವಲಯ ನೋಡೆಲ್ ಅಧಿಕಾರಿ ಬಾಲಚಂದ್ರ ಪ್ರತಿಜ್ಞಾವಿಧಿ ಬೋಧಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಕ್ರಪಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಆರಾಧ್ಯ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಜಯಮಾಲಾ ಸ್ವಾಗತಿಸಿದರು. ಪ್ರಮೀಳಾ ಜಿ. ವಂದಿಸಿದರು.
ಕ್ರೀಡಾಕೂಟದ ಮೊದಲು ಪುತ್ತೂರು ನಗರ, ಗ್ರಾಮೀಣ, ಕಡಬ, ಉಪ್ಪಿನಂಗಡಿ ವಲಯದ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕ್ರೀಡಾ ಸಂಕೇತವಾಗಿ ಬಲೂನ್ ಹಾರಿಸಲಾಯಿತು.
ದ.ಕ.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ನರಿಮೊಗರು ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಕ್ರೀಡಾಕೂಟ ಆಯೋಜಿಸಿದರು.