ರುಚಿ ಹೆಚ್ಚಿಸಲು ಯೂರಿಯಾ, ಹಾರ್ಪಿಕ್ ಬಳಸುವ ಆರೋಪದ ಹಿನ್ನೆಲೆಯಲ್ಲಿ ಪರಿಶೀಲನೆ
ಬೆಂಗಳೂರು: ಗೋಬಿ ಮಂಚೂರಿ, ಕೇಕ್, ಬಾಂಬೆ ಮಿಠಾಯಿ ಇತ್ಯಾದಿ ತಿನಿಸುಗಳಲ್ಲಿರುವ ರಾಸಾಯನಿಕ ಅಂಶವನ್ನು ಪತ್ತೆಹಚ್ಚಿರುವ ಆರೋಗ್ಯ ಇಲಾಖೆಯ ಕಣ್ಣು ಈಗ ಜನಪ್ರಿಯ ಸ್ಟ್ರೀಟ್ ಫುಡ್ ಪಾನಿಪುರಿ ಮೇಲೆ ಬಿದ್ದಿದೆ. ಗೋಲ್‌ಗಪ್ಪಾ ಎಂದೂ ಕರೆಯಲಾಗುವ ಪಾನಿಪುರಿಯಲ್ಲಿ ರುಚಿ ಹೆಚ್ಚಳಕ್ಕೆ ಯೂರಿಯಾ ಗೊಬ್ಬರ ಹಾಗೂ ಹಾರ್ಪಿಕ್ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಪ್ರಾರಂಭಿಸಿದ್ದಾರೆ.
ಕೆಲವು ರಾಜ್ಯಗಳಲ್ಲಿ ಗೋಲ್‌ಗಪ್ಪಾದ ರುಚಿ ಹೆಚ್ಚಿಸಲು ಅಪಾಯಕಾರಿ ರಾಸಾಯನಿಕ ಸೇರಿಸುತ್ತಾರೆ ಎಂಬ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಬೆಂಗಳೂರು ಸಹಿತ ಬೇರೆ ಬೇರೆ ನಗರಗಳಲ್ಲಿ ಗೋಲ್‌ಗಪ್ಪಾ ಮಾದರಿಗಳನ್ನು ಸಂಗ್ರಹಿಸುತ್ತಿದೆ. ಗೋಲ್‌ಗಪ್ಪಾ ಗುಣಮಟ್ಟದ ಮೇಲೆ ಅನೇಕ ದೂರುಗಳು ಕೇಳಿ ಬಂದ ಕಾರಣ ಗೋಲ್‌ಗಪ್ಪಾ ಪೂರಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಆಹಾರ ಇಲಾಖೆಯಿಂದ ಫುಡ್ ಟೆಸ್ಟಿಂಗ್ ಕಾರ್ಯಾಚರಣೆ ಮುಂದುವರಿದಿದ್ದು, ಗೋಲ್‌ಗಪ್ಪಾವನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಅಲ್ಲಲ್ಲಿ ಗೋಲ್‌ಗಪ್ಪಾ ಮಾದರಿ ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಕರ್ನಾಟಕದಾದ್ಯಂತ 200ಕ್ಕೂ ಹೆಚ್ಚು ಕಡೆ ಗೋಲ್‌ಗಪ್ಪಾ ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಗೋಲ್‌ಗಪ್ಪಾಗೆ ಬಳಸುವ ಪೂರಿ ಹೇಗೆ ತಯಾರು ಮಾಡುತ್ತಾರೆ? ಅದಕ್ಕೆ ಏನೆಲ್ಲಾ ಪದಾರ್ಥ ಹಾಕಲಾಗುತ್ತದೆ? ಇದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಲು ಆಹಾರ ಇಲಾಖೆ ಮುಂದಾಗಿದೆ. ಕಳೆದ ಎರಡು ದಿನಗಳಿಂದ ಗೋಲ್‌ಗಪ್ಪಾ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ ನಡೆಸಿದೆ. ಸಂಗ್ರಹಿಸಿದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಕೆಲವೇ ದಿನಗಳಲ್ಲಿ ಬರಲಿದೆ ವರದಿ ದೊರೆಯಲಿದೆ.