ಟಿಕೆಟ್ ದರ 250 ರೂ. ಮೀರದಂತೆ ಆದೇಶ ಹೊರಡಿಸುವ ಭರವಸೆ
ಬೆಂಗಳೂರು : ಸಿಕ್ಕಾಪಟ್ಟೆ ಟಿಕೆಟ್ ದರ ವಸೂಲು ಮಾಡುವ ಮಲ್ಟಿಪ್ಲೆಕ್ಸ್‌ಗಳಿಗೆ ಮೂಗುದಾರ ಹಾಕಲು ಸರಕಾರ ಮುಂದಾಗಿದೆ. ಮುಂಬಯಿ ಬಿಟ್ಟರೆ ಕರ್ನಾಟಕದಲ್ಲೇ ಸಿನಿಮಾ ಟಿಕೆಟ್ ದರ ಹೆಚ್ಚಿದೆ. ರಾಜ್ಯದಲ್ಲಿ ಟಿಕೆಟ್ ದರ ನಿಗದಿಗೆ ಯಾವುದೇ ಮಾನದಂಡಗಳಿಲ್ಲರುವುದರಿಂದ ಮಲ್ಟಿಪ್ಲೆಕ್ಸ್‌ಗಳು ತಮಗಿಚ್ಚೆ ಬಂದಂತೆ ಟಿಕೆಟ್ ದರ ನಿಗದಿ ಮಾಡಿ ಪ್ರೇಕ್ಷಕರನ್ನು ಸುಲಿಯುತ್ತಿವೆ. ಸ್ಟಾರ್ ನಟರ ಸಿನೆಮಾ ಬಿಡುಗಡೆಯಾದರೆ ಟಿಕೆಟ್ ದರ 1000-1200 ಆಗುವುದೂ ಇದೆ. ಈ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್‌ಗಳ ಟಿಕೆಟ್ ದರಕ್ಕೆ ಮಾನದಂಡ ನಿಗದಿ ಮಾಡಬೇಕೆಂಬ ಬೇಡಿಕೆ ಇತ್ತು.
ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಯಾವುದೇ ಚಿತ್ರಮಂದಿರ, ಯಾವುದೇ ಸಿನಿಮಾ ಆದರೂ ಟಿಕೆಟ್ ದರ 200 ರೂ. ದಾಟುವಂತಿಲ್ಲ ಎಂಬ ನಿಯಮ ಇದೆ. ರಾಜ್ಯದಲ್ಲೂ ಈ ಮಾದರಿಯ ಮಾನದಂಡ ಇರಬೇಖೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಸರ್ಕಾರವನ್ನು ಒತ್ತಾಯಿಸಿದ್ದು, ಇನ್ನು ಹತ್ತು ದಿನಗಳಲ್ಲಿ ಈ ಬಗ್ಗೆ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್, ಈ ಹಿಂದೆ 2017ರಲ್ಲಿ ಸಾರಾ ಗೋವಿಂದು ಅಧ್ಯಕ್ಷರಾಗಿದ್ದಾಗ, ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್‌ಗಳು ಜನರಿಂದ ಭಾರಿ ಮೊತ್ತದ ಟಿಕೆಟ್ ದರವನ್ನು ಪಡೆಯುತ್ತಿವೆ, ಇದರಿಂದ ಚಿತ್ರರಂಗಕ್ಕೆ ಮತ್ತು ಸಿನಿಮಾ ಪ್ರೇಕ್ಷಕರಿಗೆ ಸಮಸ್ಯೆ ಆಗುತ್ತಿದೆ ಎಂದು ಮನವಿ ಮಾಡಿದ್ದರು. ಅಂತೆಯೇ ಮಲ್ಟಿಪ್ಲೆಕ್ಸ್‌ಗಳ ಟಿಕೆಟ್ ದರದ ಮೇಲೆ ನಿಯಂತ್ರಣ ಹೇರುವಂತೆ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ವಾರ್ತಾ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ವಾರ್ತಾ ಇಲಾಖೆ ನೀಡಿದ್ದ ಆದೇಶದ ಮೇಲೆ ಮಲ್ಟಿಪ್ಲೆಕ್ಸ್‌ಗಳು ನ್ಯಾಯಾಲಯದಲ್ಲಿ ತಡೆ ತಂದಿದ್ದರು. ಆದರೆ ಈಗ ಆ ತಡೆ ಆದೇಶ ರದ್ದಾಗಿದೆ. ರಾಜ್ಯದ ಗೃಹ ಇಲಾಖೆಯಿಂದ ಹೊಸ ಆದೇಶ ಹೊರಡಿಸಬೇಕಾಗಿದೆ. ಈ ಬಗ್ಗೆ ನಾವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ನಮ್ಮ ನೆರೆಯ ರಾಜ್ಯಗಳಲ್ಲಿ ಇರುವ ಟಿಕೆಟ್ ದರ ಹಾಗೂ ನಮ್ಮ ರಾಜ್ಯದಲ್ಲಿ ಇರುವ ಟಿಕೆಟ್ ದರ ಇನ್ನಿತರೆ ವಿಷಯಗಳ ಬಗ್ಗೆ ಮನವರಿಕೆ ಮಾಡಿದ್ದೆವೆ. ಇನ್ನು 10 ದಿನಗಳಲ್ಲಿ ಈ ಬಗ್ಗೆ ಗೃಹ ಇಲಾಖೆಯಿಂದ ನಿಖರ ಆದೇಶ ಹೊರಡಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದಿದ್ದಾರೆ.