ಬೆಂಗಳೂರು : ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ್ ಅವರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ 20 ಲ.ರೂ. ವಸೂಲು ಮಾಡಲು ಯತ್ನಿಸಿದ ಕಾಂಗ್ರೆಸ್ ನಾಯಕಿ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ನ ನಲಪಾಡ್ ಬ್ರಿಗೇಡ್ನ ಕಲಬುರಗಿ ಜಿಲ್ಲಾಧ್ಯಕ್ಷೆ ಮಂಜುಳಾ ಪಾಟೀಲ್ (32) ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ್ (39) ವೀಡಿಯೊ ತುಣುಕುಗಳನ್ನು ತೋರಿಸಿ ಮಾಲೀಕಯ್ಯ ಗುತ್ತೆದಾರ್ ಅವರನ್ನು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು. ಗುತ್ತೆದಾರ್ ನೀಡಿದ ದೂರಿನ ಪ್ರಕಾರ ಬೆಂಗಳೂರು ಸಿಸಿಬಿ ಪೊಲೀಸ್ದಂಪತಿಯನ್ನು ಬಂಧಿಸಿದ್ದಾರೆ.
ಮಂಜುಳಾ ಪಾಟೀಲ್ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರ ಮೊಬೈಲ್ ನಂಬರ್ ಪಡೆದು ವಾಟ್ಸಪ್ನಲ್ಲಿ ಪರಿಚಯ ಮಾಡಿಕೊಂಡಿದ್ದಳು. ನಂತರ ವಾಟ್ಸಪ್ನಲ್ಲಿ ಚಾಟಿಂಗ್ ಪ್ರಾರಂಭಿಸಿದ್ದಾಳೆ. ಆಗಾಗ ಚಾಟಿಂಗ್ ಮಾಡುತ್ತಾ ತೀರಾ ಸಲುಗೆ ಬೆಳೆಸಿಕೊಂಡಿದ್ದಳು. ಈ ಮಧ್ಯೆ ತನ್ನೊಂದಿಗೆ ಖಾಸಗಿಯಾಗಿ ಕಾಣಿಸಿಕೊಂಡ ಮಾಜಿ ಸಚಿವರ ದೃಶ್ಯಗಳನ್ನು ವೀಡಿಯೊ ಫೋಟೊಗಳನ್ನು ಇಟ್ಟುಕೊಂಡು ಬೆದರಿಕೆ ಹಾಕಲು ಶುರು ಮಾಡಿದ್ದಳು.
20 ಲಕ್ಷ ರೂ. ನೀಡದೆ ಹೋದರೆ ವೀಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಬೆಳವಣಿಗೆಯಿಂದ ಕಂಗಾಲಾದ ಗುತ್ತೆದಾರ್ ಈ ಕುರಿತು ತಮ್ಮ ಪುತ್ರನಿಗೆ ವಿಷಯ ತಿಳಿಸಿದ್ದಾರೆ. ಪುತ್ರ ಮಹಿಳೆಯ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಣ ಕೊಡುವುದಾಗಿ ಮಹಿಳೆಯನ್ನು ಬೆಂಗಳೂರಿಗೆ ಕರೆಸಿ ಆಕೆ ಪತಿಯೊಂದಿಗೆ ಹಣ ಪಡೆಯಲು ಬಂದಾಗ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.