ಬೆಳ್ತಂಗಡಿ : ದ.ಕ. ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ದೇವಳದ ಅಭಿವೃದ್ಧಿಯ ದೃಷ್ಟಿಯಿಂದ ಸೌತಡ್ಕ ಕ್ಷೇತ್ರದ ಭಕ್ತಾದಿಗಳಿಂದ, ದಾನಿಗಳಿಂದ, ಹಿತೈಷಿಗಳಿಂದ ಸಂಗ್ರಹಿಸಲ್ಪಟ್ಟ ಹಣದಲ್ಲಿ ಖರೀದಿಸಲಾಗಿದ್ದ ಸ್ಥಿರಾಸ್ತಿಗಳನ್ನು ಮಹಾಗಣಪತಿ ಸೇವಾ ಟ್ರಸ್ಟ್ ಎಂಬ ಬೇನಾಮಿ ಟ್ರಸ್ಟ್ ಗೆ ಮತ್ತು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಹೆಸರಿಗೆ ಅಕ್ರಮವಾಗಿ ವರ್ಗಾವಣೆಗೊಳಿಸಿದ ವಿವಾದ ಭಕ್ತಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಪ್ರತಿಭಟನೆಗೆ ಸಿದ್ಧತೆಗಳು ನಡೆಯುತ್ತಿದೆ.
ಕೊಕ್ಕಡ ಸೌತಡ್ಕ ದೇವಳದ ಭಕ್ತಾದಿಗಳು ಇದೀಗ ಪಕ್ಷ ಬೇಧ ಮರೆತು ದೇವಾಸ್ಥಾನದ ಸ್ಥಿರಾಸ್ತಿ ರಕ್ಷಣೆಗಾಗಿ ಹೋರಾಟಕ್ಕೆ ನಿರ್ಧರಿದ್ದಾರೆ. ಈ ಬಗ್ಗೆ ಕೊಕ್ಕಡದ ಅಪೇಕ್ಷಾ ಸಭಾ ಭವನದಲ್ಲಿ ಸೌತಡ್ಕ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ, ಕೆಂಡ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಬ್ರಮಣ್ಯ ಶಬರಾಯ ಅವರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವಳದ ಭಕ್ತಾಧಿಗಳು ಈ “ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ, ಕೊಕ್ಕಡ” ಎಂಬ ಹೆಸರಿನಲ್ಲಿ ವೇದಿಕೆ ರಚಿಸಿ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಿದ್ದಾರೆ.
ವೇದಿಕೆ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ, ಉಪಾಧ್ಯಕ್ಷರುಗಳಾಗಿ ಶ್ರೀಕೃಷ್ಣ ಭಟ್ ಕುಡ್ತಲಾಜೆ, ಪ್ರಶಾಂತ ರೈ ಗೋಳಿತೊಟ್ಟು, ವಿಶ್ವನಾಥ ಶೆಟ್ಟಿ, ನೆಲ್ಯಾಡಿ, ತುಕ್ರಪ್ಪ ಶೆಟ್ಟಿ, ನೂಜಿ, ಮೋಹನ ರೈ ಕುಂಟಾಲಪಲ್ಯ, ಕಾರ್ಯದರ್ಶಿಯಾಗಿ ಶ್ಯಾಮರಾಜ್ ಪಟ್ರಮೆ, ಜೊತೆ ಕಾರ್ಯದರ್ಶಿಗಳಾಗಿ ಸುನೀಶ್ ನಾಯ್, ಗಣೇಶ್, ಕಾಶಿ, ಹರಿಶ್ಚಂದ್ರ ಜೋಡುಮಾರ್ಗ, ದಯಾನೀಶ್ ಕೊಕ್ಕಡ, ಖಜಾಂಚಿ ಯಾಗಿ ವಿಶ್ವನಾಥ ಕೊಲ್ಲಾಜೆ ಮುಂತಾದವರನ್ನು ಆಯ್ಕೆ ಮಾಡಲಾಯಿತು.
ಸಮಿತಿ ಸದಸ್ಯರುಗಳಾಗಿ ಲಕ್ಷ್ಮೀನಾರಾಯಣ ಉಪಾರ್ಣ, ಗೋಪಾಲಕೃಷ್ಣ ಭಟ್ ಮುನ್ನಡ್ಕ, ಎ.ಎನ್. ಶಬರಾಯ, ಪದ್ಮನಾಭ ಆಚಾರ್ಯ, ಚರಣ್ ಕೊಕ್ಕಡ, ಗಣೇಶ್ ಪಿ ಕೆ, ಧನಂಜಯ, ಪಟ್ರಮೆ ಕೃಷ್ಣಪ್ಪ ಗೌಡ, ಪೂವಾಜೆ, ಧರ್ಮರಾಜ್, ಅಡ್ಕಡಿ, ಜಯಂತ ಗೌಡ, ಮಾಸ್ತಿಕಲ್ಲು, ಜಾರಪ್ಪ ಗೌಡ, ಸಂಕೇಶ, ಲಕ್ಷ್ಮೀನಾರಯಣ, ವಿಶ್ವನಾಥ ಮೀಯಾಳ, ಗಣೇಶ ಪೂಜಾರಿ, ಶೀನ ನಾಯ್ಕ ತಾದವರನ್ನು ಆಯ್ಕೆ ಮಾಡಲಾಯಿತು. ಸಲಹೆಗಾರರಾಗಿ ಬಿ.ಎಂ. ಭಟ್, ಪ್ರಶಾಂತ್, ವೆಂಕಟ್ರಮಣ ಡೆಂಜ ಅವರನ್ನು ಆಯ್ಕೆ ಮಾಡಲಾಯಿತು.
ಶ್ರೀ ಕ್ಷೇತ್ರದ ಜಮೀನು ಉಳಿಸಿಕೊಳ್ಳುವ ಸಲುವಾಗಿ ಸದ್ರಿ ವೇದಿಕೆ ಮೂಲಕ ಸರಕಾರವನ್ನು ಸಂಪರ್ಕಿಸುವುದು, ಧರಣಿ, ಕಾನೂನು ಹೋರಾಟ, ಆಂದೋಲನಗಳನ್ನು ಕೈಗೊಳ್ಳುವ ಕುರಿತು ತೀರ್ಮಾನಿಸಲಾಯಿತು.
ನ.5 ರಂದು ಮಂಗಳೂರಿನಲ್ಲಿ ವೇದಿಕೆಯ ವತಿಯಿಂದ ಪತ್ರಿಕಾಗೋಷ್ಟಿ ನಡೆಸುವುದು ಎಂದು ತೀರ್ಮಾನಿಸಲಾಗಿದ್ದು, ನ.11ನೇ ಸೋಮವಾರದಿಂದ ಸೌತಡ್ಕದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ನಿರ್ಣಯಿಸಿದ್ದಾರೆ ಎಂದು ತಿಳಿದು ಬಂದಿದೆ.