ನೂರಾರು ಎಕರೆ ಕೃಷಿ ಭೂಮಿ ವಕ್ಫ್‌ ವಶ : ರೈತರು ಕಂಗಾಲು

ಪಹಣಿಯಲ್ಲಿ ವಕ್ಫ್‌ ಮಂಡಳಿಗೆ ಸೇರಿದ್ದು ಎಂದು ಸೇರ್ಪಡೆ

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ನೂರಾರು ಎಕರೆ ಕೃಷಿಭೂಮಿಯನ್ನು ವಕ್ಫ್‌ ಆಸ್ತಿ ಎಂದು ನೋಟಿಸ್‌ ನೀಡಿರುವುದು ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಈ ಕ್ರಮದ ವಿರುದ್ಧ ಕಿಡಿಕಾರಿದ್ದು, ಕಾಂಗ್ರೆಸ್‌ ಆಡಳಿತದಲ್ಲಿ ಕರ್ನಾಟಕ ಪಾಕಿಸ್ಥಾನವಾಗಿ ಬದಲಾಗುತ್ತಿದೆ ಎಂದು ಹೇಳಿದೆ.
ರೈತರು ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ನೂರಾರು ಎಕರೆ ಜಮೀನು ವಕ್ಫ್‌ ಮಂಡಳಿಗೆ ಸೇರಿದ್ದು ಎಂದು ಪಹಣಿಯಲ್ಲಿ ದಾಖಲಾಗಿದೆ. ರೈತರಿಗೆ ಕಂದಾಯ ಇಲಾಖೆಯಿಂದ ವಕ್ಫ್‌ ಆಸ್ತಿಯ ಬಗ್ಗೆ ದಾಖಲೆಗಳನ್ನು ಸಲ್ಲಿಸಲು ನೋಟಿಸ್‌ ಜಾರಿಯಾಗಿದ್ದು, ಇದರಿಂದ ರೈತರು ಕಂಗಾಲಾಗಿ ದಾಖಲೆಗಳನ್ನು ಹೊಂದಿಸಿಕೊಂಡು ಕಚೇರಿಗಳಿಗೆ ಅಲೆಯಬೇಕಾಗಿ ಬಂದಿದೆ.
ರೈತರ ಜಮೀನುಗಳ ಪಹಣಿ ಪತ್ರದ ಕಾಲಂ ನಂಬರ್ 11ರ ಋಣಗಳು ಕಾಲಂನಲ್ಲಿ “ಕರ್ನಾಟಕ ವಕ್ಫ್​ ಬೋರ್ಡ್ ಬೆಂಗಳೂರು ಮಸಜಿತ್ (ಸುನ್ನಿ) ವಕ್ಫ್​​” ಎಂದು ನಮೂದಿಸಲಾಗಿದೆ. ರೈತರ ಜಮೀನಿನ ಮೇಲೆ ವಕ್ಫ್​ ಬೋರ್ಡ್​​ ಸಾಲ ಪಡೆದು ಭೋಜ ಹಾಕಿಸಿದೆ. ರೈತರ ಜಮೀನಿನ ಪಹಣಿಯಲ್ಲಿ ವಕ್ಫ್​ ಬೋರ್ಡ್ ಭೋಜ ಇರುವ ಕಾರಣ ಸಾಲ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂಡಿ ತಾಲೂಕಿನ ತೆನ್ನಿಹಳ್ಳಿ ಗ್ರಾಮದ ಯಮನಪ್ಪ ಕೆಂಗನಾಳ ಅವರ ಜಮೀನಿನ ಪಹಣಿಯಲ್ಲಿ ವಕ್ಫ್​ ಬೋರ್ಡ್​​ ಹೆಸರು ಸೇರ್ಪಡೆಯಾಗಿದೆ. ರೈತ ಯಮನಪ್ಪ ಕೆಂಗನಾಳ ಅವರಿಗೆ ಯಾವುದೇ ತಿಳಿವಳಿಕೆ ಪತ್ರ ನೀಡದೆ, ತಹಶೀಲ್ದಾರ್​ ಏಕಾಏಕಿ ಪಹಣಿ ಪತ್ರದಲ್ಲಿ ವಕ್ಫ್​ ಬೋರ್ಡ್ ಎಂದು ಹೆಸರು ಸೇರಿಸಿದ್ದಾರೆ. ನೋಟಿಸ್ ನೀಡದೆ ಏಕಾಏಕಿ ತಮ್ಮ ಜಮೀನುಗಳ ಪಹಣಿಯಲ್ಲಿ ವಕ್ಫ್​ ಬೋರ್ಡ್ ಹೆಸರು ಸೇರಿಸಿದ್ದಕ್ಕೆ ರೈತ ಯಮನಪ್ಪ ಕೆಂಗನಾಳ ಕಂಗಾಲಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿ ಒಂದೇ ತಾಲೂಕಿನಲ್ಲಿ 13 ರೈತರಿಗೆ “ನಿಮ್ಮ ಜಮೀನುಗಳು ವಕ್ಫ್​ ಬೋರ್ಡ್ ಆಸ್ತಿಯೆಂದು” ಆಯಾ ತಹಶೀಲ್ದಾರ್​​ ಕಚೇರಿಯಿಂದ ನೋಟಿಸ್‌ ನೀಡಲಾಗಿದೆ. ಇದಲ್ಲದೇ, ಇನ್ನೂ ನೂರಾರು ರೈತರಿಗೆ ನೊಟೀಸ್ ಜಾರಿ ಮಾಡಲು ಮಾಡಲು ತಹಶೀಲ್ದಾರರು ಸಿದ್ಧತೆ ನಡೆಸಿದ್ದಾರೆ. ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿನ 1200 ಎಕರೆ ಜಮೀನು ಶಾ ಅಮೀನುದ್ದೀನ್ ದರ್ಗಾಕ್ಕೆ ಸೇರಿದ್ದು ಎಂದು ತಹಶೀಲ್ದಾರ್​​ ರೈತರಿಗೆ ನೋಟಿಸ್ ನೀಡಿದ್ದಾರೆ. ಆದರೆ ನಮ್ಮ ಗ್ರಾಮದಲ್ಲಿ ಶಾ ಅಮೀನುದ್ದೀನ್ ದರ್ಗಾ ಇಲ್ಲ ಎಂದು ರೈತರು ಹೇಳುತ್ತಿದ್ದಾರೆ.
ವಿಜಯಪುರ ಜಿಲ್ಲಾ ವಕ್ಫ್​ ಬೋರ್ಡ್ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 14,201 ಎಕರೆ ಜಮೀನು ವಕ್ಫ್​ಗೆ ಸೇರಿದೆ. ಈ ಪೈಕಿ 1354 ಎಕರೆ ಒತ್ತುವರಿಯಾಗಿದೆ. ಉಳಿದ ಜಮೀನು ವಕ್ಫ್​ ಇನ್ಸ್‌ಸ್ಟಿಟ್ಯೂಶನ್ಸ್, ಇನಾಮ್ ಆಬ್ಲಿಷನ್ಸ್, ಲ್ಯಾಂಡ್ ರಿಫಾರ್ಮ್ ಹಾಗೂ ವಕ್ಪ್ ಆ್ಯಕ್ಟ್ ವಶದಲ್ಲಿದೆ ಎಂದು ತಿಳಿಸಿದೆ.

15,000 ಎಕರೆ ವಕ್ಫ್‌ ವಶ







































 
 

ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು 15,000 ಎಕರೆ ಜಮೀನನ್ನು ವಕ್ಫ್‌ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಬಿಜೆಪಿ ಸಂಸಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ವಕ್ಫ್‌ ಮಂಡಳಿ ರೈತರ ಜಮೀನುಗಳನ್ನು ನುಂಗುವ ಕಾರ್ಯದಲ್ಲಿ ತೊಡಗಿದೆ. ಇದಕ್ಕೆ ರಾಜಕೀಯ ಬೆಂಬಲವೂ ಇದೆ. ಇದು ವಿಜಯಪುರ ಜಿಲ್ಲೆಯೊಂದರಲ್ಲೇ ಅಲ್ಲ, ಎಲ್ಲ ಜಿಲ್ಲೆಗಳಲ್ಲೂ ನಡೆದಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕೆಂದು ಬಿಜೆಪಿ ಆಗ್ರಹಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top