ಸೇನಾನೆಲೆಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ; ಭೀಕರ ಸ್ಫೋಟ
ಟೆಹ್ರಾನ್: ಕಳೆದ ಅಕ್ಟೋಬರ್ 1 ರಂದು ನಡೆದಿದ್ದ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ಶನಿವಾರ ಮುಂಜಾನೆ ವೈಮಾನಿಕ ದಾಳಿ ಆರಂಭಿಸಿದೆ. ದಾಳಿಯಿಂದಾದ ಸಾವುನೋವಿನ ಬಗ್ಗೆ ತಕ್ಷಣದ ಮಾಹಿತಿ ಸಿಕ್ಕಿಲ್ಲ. ಇರಾನ್‌ನ ಮಿಲಿಟರಿ ಗುರಿಗಳ ಮೇಲೆ ನಡೆಸಲಾದ ನಿಖರವಾದ ದಾಳಿ ಎಂದು ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ.
ಇರಾನಿನ ರಾಜಧಾನಿ ಟೆಹ್ರಾನ್‌ನಲ್ಲಿ ಭೀಕರ ಸ್ಫೋಟದ ಸದ್ದು ಕೇಳಿಸಿದೆ. ಕನಿಷ್ಠ ಏಳು ಸ್ಫೋಟಗಳು ಮುಂಜಾನೆ ವೇಳೆ ಸಂಭವಿಸಿವೆ. ಇದು ಟೆಹ್ರಾನ್ ಸುತ್ತಮುತ್ತಲಿನ ಪ್ರದೇಶವನ್ನು ಬೆಚ್ಚಿಬೀಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯೊಂದಿಗೆ ಪ್ರಾರಂಭವಾದ ಗಾಜಾಪಟ್ಟಿಯಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧ ಇರಾನ್ ತನಕ ವಿಸ್ತರಿಸಿದಂತಾಗಿದೆ.
ಇಸ್ರೇಲ್ ದಾಳಿಯಿಂದ ಕೆರಳಿ ಕೆಂಡವಾಗಿರುವ ಇರಾನ್ ಪ್ರತೀಕಾರ ತೀರಿಸುವುದಾಗಿ ಹೇಳಿಕೊಂಡಿದೆ. ಇಸ್ರೇಲ್ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಸೀಮಿತ ಹಾನಿ ಮಾಡಲಷ್ಟೇ ಇಸ್ರೇಲ್‌ಗೆ ಸಾಧ್ಯವಾಗಿದೆ. ಇದಕ್ಕೆ ಪ್ರತಿದಾಳಿಯನ್ನು ಇಸ್ರೇಲ್ ನಿರೀಕ್ಷಿಸಬೇಕು ಎಂದು ಇರಾನ್ ಸರಕಾರ ಹೇಳಿದೆ.
ಇಸ್ರೇಲ್‌ನ ಅನೇಕ ಫೈಟರ್ ಜೆಟ್ ವಿಮಾನಗಲು ಇರಾನ್‌ನತ್ತ ಮುನ್ನುಗ್ಗಿವೆ. ಪ್ರಧಾಮಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಸೇನೆಯ ಮುಖ್ಯಕಚೇರಿಯಲ್ಲೇ ಕುಳಿತು ಯುದ್ಧ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಸದ್ಯಕ್ಕೆ ಇರಾನ್‌ನ ಸೇನಾನೆಲೆಗಳ ಮೇಲೆ ಮಾತ್ರ ದಾಳಿಯಾಗುತ್ತಿದೆ. ಅಣ್ವಸ್ತ್ರ ನೆಲೆಗಳು ಮತ್ತು ತೈಲ ನೆಲೆಗಳ ಮೇಲೆ ದಾಳಿ ಮಾಡಿಲ್ಲ ಎಂದು ಇಸ್ರೇಲ್ ಹೇಳಿದೆ.