ದೇವರ ಮೇಲಿನ ನಂಬಿಕೆ ದೊಡ್ಡದಾ, ವಿಜ್ಞಾನದ ಸಿದ್ಧಾಂತ ದೊಡ್ಡದಾ?

ನಂಬಿಕೆ ಮೀರಿದ ವಿಜ್ಞಾನ, ವಿಜ್ಞಾನ ಮೀರಿದ ನಂಬಿಕೆ ಎರಡೂ ಸಮ್ಮತ

ಜಗತ್ತಿನ ಮಹಾವಿಜ್ಞಾನಿಗಳು ಕೂಡ ದೇವರ ಅಸ್ತಿತ್ವವನ್ನು ನಂಬುತ್ತಾರೆ ಎಂದರೆ ಆಶ್ಚರ್ಯ ಆಗ್ತಾ ಇದೆಯಾ?
There is a SUPER NATURAL POWER which controls the whole world ಎಂದಿದ್ದರು ಮಹಾವಿಜ್ಞಾನಿಯಾದ ಐನಸ್ಟೀನ್. ಅಂದರೆ ಇಂದು ಕೂಡ ಇಡೀ ಜಗತ್ತನ್ನು ನಿಯಂತ್ರಣ ಮಾಡುತ್ತಿರುವ ಒಂದು ಅತೀಂದ್ರಿಯವಾದ ಶಕ್ತಿ ಇದೆ ಎಂದರ್ಥ. ಆ ಶಕ್ತಿಯು ನಮ್ಮ ಇಂದ್ರಿಯಗಳ ಗ್ರಹಿಕೆಗೆ ಮೀರಿದ್ದು. ಆ ಅತೀಂದ್ರಿಯ ಶಕ್ತಿಯನ್ನು ದೇವರು ಎಂದು ನೀವು ಕರೆಯಬಹುದು ಎಂದು ಐನಸ್ಟೀನ್ ಹೇಳಿದ್ದಾರೆ.

ನಮ್ಮ ವಿಜ್ಞಾನವು ಎಷ್ಟೋ ಬಾರಿ ಆ ಅತೀಂದ್ರಿಯ ಶಕ್ತಿಗೆ ಶರಣಾಗುತ್ತದೆ. ವಿಜ್ಞಾನದ ಒಬ್ಬ ವಿದ್ಯಾರ್ಥಿಯಾಗಿ ನಾನು ಆ ಶಕ್ತಿಯನ್ನು ನಂಬುತ್ತೇನೆ.





































 
 

ವೈದ್ಯಕೀಯ ವಿಜ್ಞಾನ ಕೂಡ ಕೆಲವೊಮ್ಮೆ ಆ ಶಕ್ತಿಗೆ ಶರಣಾಗಿದೆ

ವೈದ್ಯಕೀಯ ವಿಜ್ಞಾನ ಕೂಡ ಈ ಅತೀಂದ್ರಿಯವಾದ ಆ ಶಕ್ತಿಯನ್ನು ನಂಬುತ್ತದೆ. ಎಷ್ಟೋ ದೊಡ್ಡ ಪರಿಣತ ವೈದ್ಯರು ಹತಾಶೆಯಿಂದ ಕೈಬಿಟ್ಟ ಪ್ರಕರಣಗಳ ಕೊನೆಯಲ್ಲಿ ರೋಗಿಗಳು ಪವಾಡ ಸದೃಶವಾಗಿ ಎದ್ದು ಬಂದ ನೂರಾರು ಪ್ರಕರಣಗಳು ಹಿಂದೆ ಜಗತ್ತಿನಾದ್ಯಂತ ನಡೆದಿವೆ, ಇಂದಿಗೂ ನಡೆಯುತ್ತಿವೆ. ಕಾಲ ಎಷ್ಟು ಮುಂದುವರಿದಿದೆ ಎಂದರೂ ಈ ಶಕ್ತಿಶಾಲಿಯಾದ ನಂಬಿಕೆಗಳು ನಡೆಯುತ್ತ ಇರುತ್ತವೆ. ಮಿರಾಕಲ್ ಇಂದಿಗೂ ನಡೆಯುತ್ತಿವೆ.

ಎಲ್ಲ ಆಸ್ಪತ್ರೆಗಳ ಕ್ಯಾಂಪಸ್‌ಗಳಲ್ಲಿ ಗಣಪತಿಯ ಮೂರ್ತಿಯ ಪ್ರತಿಷ್ಠೆ ಆಗಿರುವುದು ಸುಮ್ಮನೆ ಅಲ್ಲ. ಎಷ್ಟೋ ಪರಿಣತ ವೈದ್ಯರು ಶಸ್ತ್ರಚಿಕಿತ್ಸೆ ಆರಂಭ ಮಾಡುವಾಗ ದೇವರಿಗೆ ಕೈ ಮುಗಿದದ್ದು ನಾನು ನೋಡಿದ್ದೇನೆ.

ಪ್ರಾರ್ಥನೆ ಎಂಬ ಅದ್ಭುತ ಚಿಕಿತ್ಸೆ

ಅಮೆರಿಕದಲ್ಲಿ ವಾಸ ಆಗಿರುವ ಡಾಕ್ಟರ್ ಆನಂದ್ ಅವರು ಒಂದು ವೇದಿಕೆಯಲ್ಲಿ ಹೇಳಿದ ಒಂದು ಉದಾಹರಣೆಯನ್ನು ಇಲ್ಲಿ ಉಲ್ಲೇಖ ಮಾಡುತ್ತಿದ್ದೇನೆ. ಅದು ಖಂಡಿತ ಉತ್ಪ್ರೇಕ್ಷೆ ಇರಲಾರದು.

ಒಮ್ಮೆ ಅವರು ಸುದೀರ್ಘವಾದ ವಿದೇಶದ ಪ್ರವಾಸಕ್ಕೆ ಹೋಗಬೇಕಾದ ಪ್ರಸಂಗ ಬಂದಿತ್ತು. ಆಗ ಅವರು ರೂಟೀನ್ ಆಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ. ಆಗ ಅವರ ಶ್ವಾಸಕೋಶದಲ್ಲಿ ಕ್ಯಾನ್ಸರ್ ಗಡ್ಡೆಗಳು ಪತ್ತೆ ಆದವು. ಅವರು ತನ್ನ ವಿದೇಶದ ಯಾತ್ರೆಯನ್ನು ಮುಂದಕ್ಕೆ ಹಾಕುವ ಹಾಗಿರಲಿಲ್ಲ. ಅವರು ತನ್ನ ಎಲ್ಲ ಸ್ನೇಹಿತರಿಗೆ ಮತ್ತು ಬಂಧುಗಳಿಗೆ ಒಂದು ಮೇಲ್ ಕಳುಹಿಸುತ್ತಾರೆ. ಅದರಲ್ಲಿ ಎರಡೇ ವಾಕ್ಯ ಇತ್ತು.

“ನನ್ನ ದೇಹದಲ್ಲಿ ಕ್ಯಾನ್ಸರ್ ಟ್ರೇಸ್ ಆಗಿದೆ. ಯಾರೂ ನನಗಾಗಿ ಆತಂಕ ಮಾಡಬೇಡಿ. ನನಗಾಗಿ ನೀವು ನಂಬುವ ದೇವರಲ್ಲಿ ಪ್ರಾರ್ಥನೆ ಮಾಡಿ. ಚರ್ಚಲ್ಲಿ ಕ್ಯಾಂಡಲ್ ಹಚ್ಚಿ. ನಿಮ್ಮ ಪ್ರಾರ್ಥನೆಗಳು ನನ್ನಲ್ಲಿ ಖಂಡಿತ ಶಕ್ತಿ ತುಂಬುತ್ತದೆ” ಎಂದು ಹೇಳಿ, ಅವರೂ ಪ್ರಾರ್ಥನೆ ಮಾಡಿ ವಿದೇಶದ ಪ್ರಯಾಣಕ್ಕೆ ಹೊರಟೇ ಹೋದರು.

ತಮ್ಮ ಎಲ್ಲ ಸೆಮಿನಾರ್ ಮುಗಿಸಿ ಹಿಂದೆ ಬರುವಾಗ ಅವರ ದೇಹದಲ್ಲಿ ಕ್ಯಾನ್ಸರ್ ಟ್ರೇಸಸ್ ಕಡಿಮೆ ಇದ್ದವು ಎಂದು ಅವರು ಹೇಳಿದ್ದಾರೆ. ಅವರು ಹೇಳುವ ಪ್ರಕಾರ ನಮ್ಮ ಪ್ರಾರ್ಥನೆಯಲ್ಲಿ ತುಂಬಾ ಶಕ್ತಿ ಇದೆ. ಪ್ರಾರ್ಥನೆಯು ಖಂಡಿತ ಮೌಢ್ಯ ಅಲ್ಲ ಅನ್ನುತ್ತಾರೆ ಅವರು. ನಿಮಗೋಸ್ಕರ ದೂರದಲ್ಲಿ ಯಾರೋ ಪ್ರಾರ್ಥನೆ ಮಾಡುವುದರಿಂದ ಅದರ ಲಾಭಗಳು ನಿಮಗೆ ದೊರೆತಿರುವುದು ಖಂಡಿತವಾಗಿ ಹೌದು. ಅದರಲ್ಲಿ ಕೂಡ ಸಾಮೂಹಿಕ ಪ್ರಾರ್ಥನೆಗಳಲ್ಲಿ ಹೆಚ್ಚು ಶಕ್ತಿ ಇದೆ ಎಂದು ಅವರು ಹೇಳುತ್ತಾರೆ.

ಮಹಾಸಾಧನೆಗಳಿಗೆ ಕೂಡ ಪ್ರಾರ್ಥನೆಯೇ ಪ್ರೇರಣೆ

ಒಂದೇ ಕಾಲಿನಲ್ಲಿ ಮೌಂಟ್ ಎವರೆಸ್ಟ್ ಏರಿದ ಅರುಣಿಮಾ ಸಿನ್ಹಾ ಅವರು ತನ್ನ ಯಾತ್ರೆಯ ಅಂತಿಮ ಘಟ್ಟದಲ್ಲಿ ಆಕ್ಸಿಜನ್ ಸಿಲಿಂಡರ್ ಖಾಲಿ ಆಗಿ ತೊಂದರೆ ಎದುರಾದಾಗ ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥನೆ ಮಾಡಿಕೊಂಡು ತನ್ನ ಸಮಸ್ಯೆಯನ್ನು ಪರಿಹಾರ ಮಾಡಿಕೊಂಡೆ ಎಂದು ತನ್ನ ಆತ್ಮಚರಿತ್ರೆಯ ಪುಸ್ತಕದಲ್ಲಿ ಬರೆದಿದ್ದಾರೆ.

ಚಂದ್ರಯಾನಕ್ಕೆ ಪೂರ್ವಭಾವಿಯಾಗಿ ಇಸ್ರೊದ ಹಿರಿಯ ವಿಜ್ಞಾನಿಗಳು ಅದರ ಮಾಡೆಲನ್ನು ತಿರುಪತಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿದಾಗ ನಕ್ಕವರು ಎಷ್ಟೋ ಮಂದಿ.

ಅಂದರೆ ಪ್ರಾರ್ಥನೆಯಲ್ಲಿ ಯಾವುದೋ ಒಂದು ಇಂಟೆನ್ಸ್ ಆದ ಶಕ್ತಿ ಇದೆ ಅನ್ನುವುದಕ್ಕೆ ನನ್ನ ಹತ್ತಿರ ಇನ್ನೂ ಹಲವಾರು ನಿದರ್ಶನಗಳು ಇವೆ. ಇಂದಿಗೂ ಕೃತಕ ಉಪಗ್ರಹಗಳನ್ನು ಹಾರಿಸುವ ಮೊದಲು ಸಾಮೂಹಿಕ ಪ್ರಾರ್ಥನೆಗಳನ್ನು ವಿಜ್ಞಾನಿಗಳು ಮಾಡುತ್ತಾರೆ. ಆ ಪ್ರಾರ್ಥನೆ ನಮಗೆ ಆಧ್ಯಾತ್ಮಿಕ ಶಕ್ತಿಯನ್ನು ಒದಗಿಸುತ್ತದೆ ಎಂದಾದರೆ ಅದು ಮೌಢ್ಯ ಆಗುವುದು ಹೇಗೆ?

ದೇಹದ ಒಳಗಿನ ಜೀವಕೋಶಗಳು ಪಾಸಿಟಿವ್ ಭಾವನೆಗಳಿಗೆ ಸ್ಪಂದಿಸುತ್ತವೆ

ನಮಗೆ ಆರೋಗ್ಯ ಸಮಸ್ಯೆ ಬಂದಾಗ ನಾವು ಯಾವುದೋ ವೈದ್ಯರ ಬಳಿ ಹೋಗುವುದಕ್ಕಿಂತ ಕುಟುಂಬದ ವೈದ್ಯರ ಬಳಿ ಹೋಗುವುದು ಯಾಕೆ? ನಮಗೆ ಆ ವೈದ್ಯರ ಮೇಲೆ ಇರುವ ನಂಬಿಕೆ ಔಷಧಿಯ ಶಕ್ತಿಯನ್ನು ಹೆಚ್ಚು ಮಾಡದೆ ಇರಬಹುದು. ಆದರೆ ನಮ್ಮ ದೇಹದ ಜೀವಕೋಶಗಳು ಆ ಔಷಧಿಯನ್ನು ಸ್ವೀಕಾರ ಮಾಡಲು ಆ ನಂಬಿಕೆ ಹೆಚ್ಚು ತಯಾರು ಮಾಡುತ್ತದೆ.
ನಮ್ಮ ದೇಹದ ಜೀವಕೋಶಗಳು ಪಾಸಿಟಿವ್ ಭಾವನೆಗಳಿಗೆ ಸ್ಪಂದನೆ ಕೊಡುತ್ತವೆ ಅನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಪ್ರೀತಿ, ನಂಬಿಕೆ, ಭರವಸೆ, ಗೆಳೆತನ, ಸಾಂತ್ವನ, ಕಾಳಜಿ ಮೊದಲಾದ ಪಾಸಿಟಿವ್ ಭಾವನೆಗಳು ದೊಡ್ಡ ಮಿರಾಕಲ್ ಕ್ರಿಯೇಟ್ ಮಾಡುವುದನ್ನು ವೈದ್ಯಕೀಯ ವಿಜ್ಞಾನ ಅಚ್ಚರಿಯಿಂದ ಗಮನಿಸುತ್ತಿದೆ. ಸಹಜ ಪ್ರೀತಿ ಉಂಟು ಮಾಡುವ ಮಿರಾಕಲ್ ಅದು ಅದ್ಭುತವೇ ಆಗಿದೆ.

ದೇವರ, ದೈವಗಳ ಮೇಲಿನ ನಂಬಿಕೆಗಳು ವರ್ಕ್ ಆಗ್ತಾವೆ

ಅದೇ ರೀತಿ ದೇವರ, ದೈವಗಳ ಮೇಲೆ ನಮಗೆ ಇರುವ ಗಾಢವಾದ ನಂಬಿಕೆ ಕೂಡ ನಮ್ಮನ್ನು ಒಳಗಿನಿಂದ ಸ್ಟ್ರಾಂಗ್ ಮಾಡುತ್ತಾ ಹೋಗುತ್ತದೆ. ಈ ನಂಬಿಕೆ ನಮಗೆ ನೀಡುವ ಅಪಾರ ಸಾಂತ್ವನ ಮತ್ತು ಧೈರ್ಯಗಳನ್ನು ನಾವು ಕಡೆಗಣಿಸಲು ಸಾಧ್ಯವೆ ಇಲ್ಲ.
ಕರಾವಳಿಯ ಸಿರಿಜಾತ್ರೆಗಳಲ್ಲಿ ಭಾಗವಹಿಸಿ ಆವೇಶವನ್ನು ಪಡೆದು ತಮ್ಮ ಒಳಗಿನ ತೀವ್ರ ನೋವನ್ನು ಕಳೆದುಕೊಂಡು ಹಗುರಾಗುವ ಸ್ತ್ರೀಯರನ್ನು ನಾನು ನೋಡಿದ್ದೇನೆ. ಉತ್ತರ ಕರ್ನಾಟಕದ ಕೆಲವು ದೇವಸ್ಥಾನಗಳ ಜಾತ್ರೆಗಳಲ್ಲಿ ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆಯನ್ನು ತೆಗೆಯುವ ಭಕ್ತರನ್ನು ನಾನು ನೋಡಿದ್ದೇನೆ. ಅವರ ಕೈಗಳು ಸುರಕ್ಷಿತವಾಗಿ ಇರುವುದು ಕೇವಲ ಪವಾಡ ಆಗಿರಲಾರದು. ಅದನ್ನು ಭಕ್ತಿಯ ಪರಾಕಾಷ್ಠೆ ಎಂದು ನೀವು ಕರೆದರೂ ಸರಿ. ಅದರ ಹಿಂದೆ ಯಾವುದೋ ಮನೋವಿಜ್ಞಾನ ಖಂಡಿತ ಕೆಲಸ ಮಾಡುತ್ತಿರಬೇಕು.
ಅದ್ಯಾವ ಶಕ್ತಿ ಇರಬಹುದು ಎನ್ನುವುದು ನನ್ನ ಮತ್ತು ನಿಮ್ಮ ಕಲ್ಪನೆಗೆ ಮೀರಿದೆ ಎಂದು ನಾನು ಖಚಿತವಾಗಿ ಹೇಳುತ್ತೇನೆ.

ದೈವಾರಾಧನೆಯನ್ನು ಮೌಢ್ಯ ಎನ್ನಲು ಸಾಧ್ಯವೇ?

ಇನ್ನು ಕರಾವಳಿ ಕರ್ನಾಟಕ ಮತ್ತು ಇತರೆಡೆ ಹರಡಿರುವ ದೈವಾರಾಧನೆಯ ನಂಬಿಕೆಯನ್ನು ಪ್ರಶ್ನೆ ಮಾಡುವುದು ಅಷ್ಟು ಸುಲಭವಲ್ಲ. ಏಕೆಂದರೆ ಅದು ನಮ್ಮ ಜನರ ರಕ್ತದ ಕಣವನ್ನು ಸೇರಿ ಆಗಿದೆ. ಕಣ್ಣಿಗೆ ಕಾಣದ ದೇವರ ಶಕ್ತಿಗಿಂತ ಕಣ್ಣಿಗೆ ಕಾಣುವ ದೈವಗಳ ಪ್ರಭಾವವನ್ನು ಅವರು ಹೆಚ್ಚು ನಂಬುತ್ತಾರೆ.
ನಮಗೆ ಯಾವ ರೀತಿಯ ಕಷ್ಟಗಳು ಬಂದರೂ ನಮ್ಮ ಬೆನ್ನಿಗೆ ದೈವಗಳು ನಿಂತು ಕಾಪಾಡುತ್ತವೆ ಎಂಬ ನಂಬಿಕೆ ಜನರ ಸುಪ್ತ ಮನಸಿನಲ್ಲಿ ಆಳವಾಗಿ ಬೇರೂರಿ ಬಿಟ್ಟಿದೆ. ಎಷ್ಟೋ ಮನೋದೈಹಿಕ ಸಮಸ್ಯೆಗಳಿಗೆ ದೈವಾರಾಧನೆಯ ಮೂಲಕ ಪರಿಹಾರ ದೊರೆಯುತ್ತ ಇವೆ ಅಂದರೆ ನಂಬಲೇಬೇಕು.

ಹಾಗೆಯೇ ಹಲವು ಕೌಟುಂಬಿಕ ಸಮಸ್ಯೆಗಳು, ಗ್ರಾಮದ ಸಮಸ್ಯೆಗಳು, ಊರಿನ ಸಮಸ್ಯೆಗಳು ದೈವಶಕ್ತಿಯಿಂದ ಪರಿಹಾರ ಆಗಿವೆ. ಹಾಗೆಂದು ನಾವು ಹೇಳುವುದಕ್ಕಿಂತ ಜನರ ತೀವ್ರವಾದ ನಂಬಿಕೆಯಿಂದ ಪರಿಹಾರ ಆಗಿವೆ ಅನ್ನುವುದು ಹೆಚ್ಚು ಸತ್ಯ. ಅಂದರೆ ದೈವದ ಮೇಲಿನ ಅವರ ನಂಬಿಕೆಯು ದೈವಗಳಿಗಿಂತ ಶಕ್ತಿಶಾಲಿ.

ಹಾಗಿರುವಾಗ ದೈವಾರಾಧನೆಯನ್ನು ಮೌಢ್ಯ ಎಂದು ನೀವು ಕರೆಯುವುದು ಹೇಗೆ? ಅದು ಶತಮಾನಗಳಿಂದ ಬಂದಿರುವ ನಂಬಿಕೆಯ ಭಾಗವೇ ಆಗಿದೆ.
ಕಾಂತಾರದಂತಹ ಸಿನೆಮಾಗಳು ಈ ನಂಬಿಕೆಗಳನ್ನು ಇನ್ನಷ್ಟು ಬಲಪಡಿಸುತ್ತವೆ.

ವಿಜ್ಞಾನವು ಅದರಷ್ಟಕ್ಕೆ ಅದು ಪರಿಪೂರ್ಣವಾ?

ಅದರ ಜೊತೆಗೆ ವಿಜ್ಞಾನವು ಅದರಷ್ಟಕ್ಕೆ ಅದು ಪರಿಪೂರ್ಣ ಅಲ್ಲ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಸಾವಿರಾರು ವರ್ಷಗಳ ಅವಧಿಯಲ್ಲಿ ಜಗತ್ತು ನಂಬಿದ್ದ ‘ಭೂಮಿಯೇ ಸೃಷ್ಟಿಯ ಕೇಂದ್ರ’ ಎಂಬ ಸಿದ್ಧಾಂತ ಮುಂದೆ ‘ಸೌರಕೇಂದ್ರ ಸಿದ್ಧಾಂತ’ವಾಗಿ ಬದಲಾವಣೆ ಆಯಿತು. ಎಂಟು ಗ್ರಹಗಳು ಸೂರ್ಯನ ಸುತ್ತ ಪರಿಭ್ರಮಣ ಹೊಂದುವ ಕಕ್ಷೆಯು ಎಷ್ಟೋ ಶತಮಾನಗಳ ಕಾಲ ವೃತ್ತಾಕಾರವಾಗಿದೆ ಎನ್ನುತ್ತಿದ್ದ ವಿಜ್ಞಾನ ಮುಂದೆ ಅದು ದೀರ್ಘ ವೃತ್ತ(ಎಲ್ಲಿಪ್ಸ್) ಆಕಾರದ ಕಕ್ಷೆ ಎಂಬುದನ್ನು ಒಪ್ಪಿಕೊಂಡಿತು.

ಪರಮಾಣುವನ್ನು ಒಡೆಯುವುದು ಸಾಧ್ಯವೇ ಇಲ್ಲ ಎಂಬ ಡಾಲ್ಟನ್ ಸಿದ್ಧಾಂತವು ಮುಂದೆ ತಪ್ಪುಎಂದು ಪ್ರೂವ್ ಆಯಿತು ತಾನೇ? ಹೀಗೆ ಎಷ್ಟೋ ವಿಜ್ಞಾನದ ಸ್ವೀಕೃತ ಸಿದ್ಧಾಂತಗಳು ಕೂಡ ಮುಂದೆ ತಪ್ಪು ಎಂದು ಪ್ರೂವ್ ಆದ ಉದಾಹರಣೆಗಳು ಇವೆ. ಅಂದರೆ ವಿಜ್ಞಾನವು ಅದರಷ್ಟಕ್ಕೆ ಅದು ಪರಿಪೂರ್ಣ ಆಗಲು ಸಾಧ್ಯ ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಆದರೆ ವಿಜ್ಞಾನದ ಪ್ರಭಾವವನ್ನು ನಾನು ಅಲ್ಲಗಳೆಯುವುದಿಲ್ಲ.

ನಂಬಿಕೆ ಮತ್ತು ವಿಜ್ಞಾನ ಎರಡೂ ಒಂದಕ್ಕೊಂದು ಪೂರಕ

ಅಂದರೆ ನಂಬಿಕೆ ಮೀರಿದ ವಿಜ್ಞಾನ, ವಿಜ್ಞಾನವನ್ನು ಮೀರಿದ ನಂಬಿಕೆ ಎರಡೂ ನನಗೆ ಸಮ್ಮತ ಇವೆ.

ಅದಕ್ಕೆ ಕನ್ನಡದ ದೃಷ್ಟಾರ ಕವಿಯಾದ ಡಿವಿಜಿ ಅವರ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ ಒಂದು ವಾಕ್ಯ ಹೆಚ್ಚು ಅರ್ಥಪೂರ್ಣ ಎಂದು ನನಗೆ ಅನ್ನಿಸಿದೆ.
ಋಷಿ ವಾಕ್ಯದೊಡನೆ(ನಂಬಿಕೆ) ವಿಜ್ಞಾನ, ಕಲೆ ಮೇಳವಿಸೆ ಜಸವು ಜನಜೀವನಕೆ ಮಂಕುತಿಮ್ಮ.
ಏನಂತೀರಿ?

ರಾಜೇಂದ್ರ ಭಟ್ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top