ವಿದ್ಯುತ್, ಇಂಟರ್‌ನೆಟ್ ಸಂಪರ್ಕವಿಲ್ಲದೆ ಜನರ ಪರದಾಟ
ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರು ನಗರ ಕಂಡು ಕೇಳರಿಯದ ಮಳೆಯ ಆರ್ಭಟ ಎದುರಿಸುತ್ತಿದೆ. ಭಾರಿ ಮಳೆಯಿಂದಾಗಿ ನಗರದ ಜನಜೀವನ ಪೂರ್ತಿ ಅಸ್ತವ್ಯಸ್ತಗೊಂಡಿದ್ದು, ಜನರು ಮನೆಯಿಂದ ಹೊರಗಿಳಿಯಲು ಸಾಧ್ಯವಾಗದ ಪರಿಸ್ಥಿತಿಯಿದೆ. ಯಲಹಂಕ ಪ್ರದೇಶದಲ್ಲಿ ಉಂಟಾದ ಮೇಘಸ್ಫೋಟದಿಂದ ಇಲ್ಲಿನ ನಿವಾಸಿಗಳು ಬಹಳ ಕಷ್ಟಪಡುತ್ತಿದ್ದಾರೆ. ಭಾರಿ ಮಳೆಯಿಂದಾಗಿ 10 ಲೇಔಟ್‌ಗಳು ಮತ್ತು ಸುತ್ತಮುತ್ತಲಿನ ಸಾವಿರಾರು ನಿವಾಸಿಗಳು ಆಹಾರ, ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದೆ ಕಂಗಾಲಾಗಿದ್ದಾರೆ.
ಎಲ್ಲ ದಿಕ್ಕುಗಳಿಂದಲೂ ನೀರಿನಿಂದ ಆವೃತವಾದ ಪ್ರದೇಶಗಳ ಜನರನ್ನು ದೋಣಿಗಳಲ್ಲಿ ರಕ್ಷಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಕಾರ್ಯಾಚರಣೆಯಲ್ಲಿ ತೊಡಗಿದ್ದು, ನಾಗರಿಕರನ್ನು ಸುರಕ್ಷಿತವಾಗಿ ಕರೆದೊಯ್ಯಲು ದೋಣಿಗಳನ್ನು ನಿಯೋಜಿಸಿವೆ.
ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 3,000 ನಿವಾಸಿಗಳಿದ್ದು, ಅಲ್ಲಿ ನೆಲಮಾಳಿಗೆಯು ಸಂಪೂರ್ಣವಾಗಿ ಜಲಾವೃತಗೊಂಡಿದ್ದರಿಂದ, ವಾಹನಗಳು ಮುಳುಗಿವೆ. ನಿವಾಸಿಗಳನ್ನು ಸ್ಥಳಾಂತರಿಸಲು ಕನಿಷ್ಠ 26 ದೋಣಿಗಳನ್ನು ಸೇವೆಗೆ ನಿಯೋಜಿಸಲಾಯಿತು.
ಭಾರೀ ಮಳೆಯಿಂದಾಗಿ 10 ಕೆರೆಗಳು ತುಂಬಿದ್ದು, ಈ ಪ್ರದೇಶದ 4,000 ಮನೆಗಳು ಹಾನಿಗೊಳಗಾಗಿವೆ. ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ಗಳು ತೀವ್ರವಾಗಿ ಪರಿಣಾಮ ಬೀರಿದ್ದು, ನಾವು ದೋಣಿಗಳನ್ನು ನಿಯೋಜಿಸಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಜನರಿಗೆ ಆಹಾರ, ಹಾಲು ಮತ್ತು ನೀರನ್ನು ಸರಬರಾಜು ಮಾಡಲಾಗಿದ್ದು, ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಪುನಃಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಜಿಕೆವಿಕೆ ಪ್ರದೇಶ ಮತ್ತು ವಿದ್ಯಾರಣ್ಯಪುರದಲ್ಲಿ ಮೇಘಸ್ಫೋಟದಿಂದಾಗಿ ದೊಡ್ಡಬೊಮ್ಮಸಂದ್ರ ಕೆರೆಗೆ ನೀರು ನುಗ್ಗಿ ಟಾಟಾ ನಗರ, ಸರೋವರ ಲೇಔಟ್ ಮತ್ತು ಇತರ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಬಿಬಿಎಂಪಿ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದೆ ಎಂದು ಸಚಿವರು ಹೇಳಿದರು.
ಈ ಮಹಾಮಳೆ ಇನ್ನೂ ಒಂದು ವಾರ ಮುಂದುವರಿಯುವ ಸಾಧ್ಯತೆ ಇದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲ 8 ವಲಯ ವ್ಯಾಪ್ತಿಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ದಿನವಿಡೀ ಮಬ್ಬು ವಾತಾವರಣ ಕಂಡು ಬರುತ್ತಿದೆ. ಸರ್ಜಾಪುರದಲ್ಲಿ 1 ಹಾಗೂ ಕೆಂಗೇರಿಯಲ್ಲಿ 2 ಮಕ್ಕಳು ಸೇರಿ ಒಟ್ಟು 3 ಸಾವುಗಳಾಗಿವೆ.