ಭಾರಿ ಮಳೆಗ ಕುಸಿದು ಬಿದ್ದ ನಿರ್ಮಾಣ ಹಂತದ 7 ಅಂತಸ್ತಿನ ಕಟ್ಟಡ
ಬೆಂಗಳೂರು: ಭಾರಿ ಮಳೆ ಬೆಂಗಳೂರಿನಲ್ಲಿ ಹಲವು ಅನಾಹುತಗಳನ್ನು ಸೃಷ್ಟಿಸಿದ್ದು, ನಿನ್ನೆ ಸಂಜೆ ಸಂಭವಿಸಿದ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ. ಮಂಗಳವಾರ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ 7 ಮಹಡಿಯ ಕಟ್ಟಡ ಕುಸಿದಿತ್ತು. ಓರ್ವನ ಶವ ನಿನ್ನೆಯೆ ಸಿಕ್ಕಿತ್ತು. ಉಳಿದವರ ಶವಗಳನ್ನು ಮಧ್ಯರಾತ್ರಿಗಾಗುವಾಗ ಹೊರತೆಗೆಯಲಾಗಿದೆ. ಮೃತರೆಲ್ಲ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಕಾರ್ಮಿಕರು.
ರಾತ್ರಿಯಿಡೀ ಅವಶೇಷಗಳಡಿ ಸಿಲುಕಿದವರ ಪತ್ತೆ ಮತ್ತು ರಕ್ಷಣಾ ಕಾರ್ಯ ನಡೆದಿದೆ. ಮಧ್ಯರಾತ್ರಿ ನಾಲ್ಕು ಶವಗಳು ಮೃತದೇಹಗಳು ಪತ್ತೆಯಾಗಿದ್ದು, ಇನ್ನು ಕೆಲವರು ಅವಶೇಷಗಳಡಿ ಸಿಲುಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯೆತ ಇದೆ ಎನ್ನಲಾಗಿದೆ. ಮೃತದೇಹಗಳನ್ನು ಹೊರ ತೆಗೆಯಲು ಜೆಸಿಬಿ, ಹಿಟಾಚಿಗಳ ಮೂಲಕ ಕುಸಿದ ಕಟ್ಟಡದ ಅವಶೇಷಗಳನ್ನು ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.
ಕಟ್ಟಡ ಕುಸಿಯುವ ವೇಳೆಗೆ 21 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೂಲಿ ಕಾರ್ಮಿಕರು ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆ ತಂಡ ಭೇಟಿ ನೀಡಿ ಅವಶೇಷಗಳನ್ನು ತೆಗೆಯುವ ಕೆಲಸ ನಡೆಸುತ್ತಿದ್ದಾರೆ. 6 ಮಂದಿ ಕಾರ್ಮಿಕರಿಗೆ ತೀವ್ರ ಗಾಯಗಳಾಗಿದ್ದು, ಓರ್ವ ಕಾರ್ಮಿಕನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ನಾಲ್ಕು ಮಹಡಿಯ ಕಟ್ಟಡ ನಿರ್ಮಿಸಲು ಅಕ್ರಮವಾಗಿ ಮೂರು ಮಹಡಿಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗಿತ್ತು. ಅಡಿಪಾಯ ದುರ್ಬಲವಾಗಿದ್ದ ಕಾರಣ ಭಾರಿ ಮಳೆಯಿಂದ ಕಟ್ಟಡ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಸುಮಾರು 21 ಕಾರ್ಮಿಕರು ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿನ್ನೆಯೇ ದುರಂತ ಸ್ಥಳಕ್ಕೆ ಭೇಟಿ ಪರಿಸ್ಥಿತಿ ಅವಲೋಕಿಸಿದ್ದಾರೆ.