ಪುತ್ತೂರು : ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ನೂತನ ಸಭಾಭವನ, ಅನ್ನಛತ್ರ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ದೇವಸ್ಥಾನದ ಪ್ರತಿಷ್ಠಾ ದಿನವಾದ ಫೆ.23 ರಂದು ಲೋಕಾರ್ಪಣೆಗೊಳ್ಳಲಿದೆ.
ದೇವಸ್ಥಾನದಲ್ಲಿ ಈ ಬಾರಿ 10ನೇ ವರ್ಷದ ಪ್ರತಿಷ್ಠಾ ಮಹೋತ್ಸವ ನಡೆಯಲಿದ್ದು, ಇದರ ಸವಿನೆನಪಿಗಾಗಿ ನೂತನ ಸಭಾಭವನ, ಅನ್ನಛತ್ರ ನಿರ್ಮಾಣ ಲೋಕಾರ್ಪಣೆಗೊಳ್ಳಲಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ದ್ವಾದಶ ನಾರಿಕೇಳ ಗಣಪತಿ ಹವನ, ಏಕಾದಶ ರುದ್ರಾಭಿಷೇಕ, ಸಾಮೂಹಿಕ ಆಶ್ಲೇಷ ಬಲಿ ಸೇವೆ ನಡೆಯಲಿದೆ.
ಉದ್ಘಾಟನಾ ಸಮಾರಂಭ : ನಿಟ್ಟೆ ವಿವಿ ಕುಲಪತಿ ವಿನಯ್ ಹೆಗ್ಡೆ ನೂತನ ಸಭಾಭವನವನ್ನು, ಶಾಸಕ ಸಂಜೀವ ಮಠಂದೂರು ಅನ್ನಛತ್ರವನ್ನು ಉದ್ಘಾಟಿಸಲಿದ್ದಾರೆ. ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮುಂಬೈ ದೀಪಕ್ ಆಸ್ಪತ್ರೆಯ ಡಾ.ಭಾಸ್ಕರ ಶೆಟ್ಟಿ, ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್, ಎಸ್‍ಕೆಡಿಆರ್ ಡಿಪಿ ಬಿ.ಸಿ.ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಪ್ರಗತಿಪರ ಕೃಷಿಕ ಮಿತ್ತೂರು ಪುರುಷೋತ್ತಮ ಭಟ್ ಪಾಲ್ಗೊಳ್ಳಲಿದ್ದಾರೆ.
ಅಪರಾಹ್ನ ವಿಠಲ ನಾಯಕ್ ಬಳಗದವರಿಂದ ಗೀತ ಸಾಹಿತ್ಯದ ಸಂಭ್ರಮ ಜರಗಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ತಿಳಿಸಿದ್ದಾರೆ.