ಎರಡು ಬಾಕ್ಸ್ ದಾಖಲೆ ಒಯ್ದ ತನಿಖಾಧಿಕಾರಿಗಳು
ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಇ.ಡಿ ದಾಳಿ ಅಂತ್ಯಗೊಂಡಿದೆ. ಮೊದಲ ದಿನ ಬರೋಬ್ಬರಿ 12 ಗಂಟೆ ಮುಡಾದಲ್ಲಿ ಬೀಡುಬಿಟ್ಟು ತಪಾಸಣೆ ವಿಚಾರಣೆ ಪರಿಶೀಲನೆ ನಡೆಸಿದ್ದ ಇ.ಡಿ ಅಧಿಕಾರಿಗಳು ಎರಡನೇ ದಿನವೂ 17 ಗಂಟೆಗಳ ಕಾಲ ಮಾಹಿತಿ ಕಲೆಹಾಕಿದ್ದಾರೆ. ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರೆ, ಇನ್ನು ಕೆಲ ದಾಖಲೆಗಳನ್ನು ಹಾರ್ಡ್ ಡಿಸ್ಕ್‌ನಲ್ಲಿ ಸಂಗ್ರಹಿಸಿಕೊಂಡು ಹೋಗಿದ್ದಾರೆ.
ಮುಡಾದಿಂದ ಸಾವಿರಾರು ಪುಟಗಳ ದಾಖಲೆಗಳನ್ನು ಇಡಿ ವಶಕ್ಕೆ ಪಡೆದಿದೆ. ಎಲ್ಲ ಹಂತದ ಅಧಿಕಾರಿಗಳ ವಿಚಾರಣೆ ನಡೆಸಿದೆ. ನಿನ್ನೆ ಬೆಳಗ್ಗೆ 10 ಗಂಟೆಯಿಂದ ಮಧ್ಯರಾತ್ರಿ 2.40 ರವರೆಗೆ ವಿಚಾರಣೆ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು ವಾಪಸ್ ನೀಡಿದ 14 ನಿವೇಶನ ಹಾಗೂ ಮುಡಾದಲ್ಲಿ 50:50 ಅನುಪಾತದಡಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ದಾಖಲೆ ಸಂಗ್ರಹಿಸಿ ಎರಡು ಬಾಕ್ಸ್‌ಗಳಲ್ಲಿ ದಾಖಲೆಗಳನ್ನ ತೆಗೆದುಕೊಂಡು ಹೋಗಿದ್ದಾರೆ.
ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಮುಡಾಗೆ ನೀಡಿದ ಮನವಿ ಪತ್ರದಲ್ಲಿ ವೈಟ್ನರ್ ಹಾಕಿರುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಅಕ್ರಮವನ್ನು ಮುಚ್ಚಿ ಹಾಕಲು ದಾಖಲೆಯನ್ನು ತಿದ್ದಿ ವೈಟ್ನರ್ ಹಾಕಲಾಗಿದೆ ಆರೋಪ ಕೇಳಿ ಬಂದಿತ್ತು. ಇದಾದ ನಂತರ ವೈಟ್ನರ್‌ಗೆ ಟಾರ್ಚ್ ಬಿಟ್ಟು ವಿಡಿಯೋ ಸಹ ಮಾಡಲಾಗಿತ್ತು ಆ ವಿಡಿಯೋವನ್ನು ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸ್ಪಷ್ಟನೆ ನೀಡಿದ್ದರು. ಈ ಮೂಲ ದಾಖಲೆ ಪರಿಶೀಲನೆ ಸಹ ಇ.ಡಿ ಅಧಿಕಾರಿಗಳು ಮಾಡಿದ್ದಾರೆ ಎನ್ನಲಾಗಿದೆ.